ಮಾಸಾಂತ್ಯದೊಳಗೆ ಅನುದಾನ ಬಳಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ

14TMK_DC_Meeting
Published on

ತುಮಕೂರು : ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಅರ್ಜಿದಾರರು ಕೇಳುವ ಮಾಹಿತಿಗೆ ಸಮರ್ಪಕವಾದ ಉತ್ತರ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಟಿಐಯಡಿ ಸ್ವೀಕೃತವಾಗುವ ಅರ್ಜಿಗಳಿಗೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸಬೇಕು ಎಂದರು.

ಯಾವುದೇ ಮಾಹಿತಿ ಬಯಸಿ ಅರ್ಜಿ ಬಂದರೂ ಕೂಡಲೇ ಆಯಾ ತಹಸೀಲ್ದಾರ್ ಹಾಗೂ ತಾಪಂ ಇಒಗಳು ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಪರಿಶಿಷ್ಟರ ಶ್ರೇಯೋಭಿವೃದ್ಧಿಗಾಗಿ ಪರಿಶಿಷ್ಟ ಜಾತಿ, ಪಂಗಡದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸಮರ್ಪಕವಾಗಿ ವಿನಿಯೋಗಿಸಬೇಕು ಎಂದರು. ಜಿಲ್ಲೆಯಲ್ಲಿ ಕರೊನಾ ಲಸಿಕೆಯ ಎರಡನೇ ಡೋಸ್ ಲಸಿಕಾಕರಣ ಶೇ.95 ಪೂರ್ಣಗೊಂಡಿದ್ದು ಬಾಕಿ ಲಸಿಕಾಕರಣವನ್ನು ಪೂರ್ಣಗೊಳಿಸಿ ಶೇ.100 ಗುರಿ ಸಾಧಿಸಬೇಕು ಎಂದರು. ಅಲೆಮಾರಿ, ಅರೆ ಅಲೆಮಾರಿಗಳಿಗೆ ವಸತಿ ಕಲ್ಪಿಸುವ ಸಂಬಂಧ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಸೂಚಿಸಿದರು.

ಆರ್ಥಿಕ ವರ್ಷ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ, ಟ್ರೇಡ್ ಲೈಸನ್ಸ್‌ಗಳ ಮೇಲೆ ತೆರಿಗೆ ಸಂಗ್ರಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳನ್ನು ನಡೆಸಲು ಯಾವುದೇ ನಿಬರ್ಂಧವಿರುವುದಿಲ್ಲವಾದರೂ ಜನರು ಕರೊನಾ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ ಎಂದರು.

ಇತ್ತೀಚಿಗೆ ಪಾವಗಡದಲ್ಲಿ ವಾಹನದಲ್ಲೇ ಹೆರಿಗೆಯಾದ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಗರ್ಭಿಣಿ ಸೇರಿ ಯಾವುದೇ ರೋಗಿಯನ್ನು ಸಕಾಲಕ್ಕೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಬೇಕು. ಅನಗತ್ಯ ವಿಳಂಬ ಕಂಡು ಬಂದರೆ ಆರೋಗ್ಯಾಧಿಕಾರಿಗಳು ಆ್ಯಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ ಗ್ರಾಮಠಾಣಗಳಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಕ್ರಮಕೈಗೊಳ್ಳಬೇಕೆಂದು ಡಿಡಿಪಿಐ ಸಿ.ನಂಜಯ್ಯಗೆ ಸೂಚಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್‌ಗಳಾದ ಮೋಹನ್ ಕುಮಾರ್, ಮಮತಾ ಎಂ., ಮಹಾಬಲೇಶ್ ಮತ್ತಿತರರು ಇದ್ದರು.

ಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿಯೂ ಚಾಲನೆ ನೀಡಲಾಗಿದ್ದು, ಕಂದಾಯ ದಾಖಲೆಗಳನ್ನು ನೀಡಿ ರೈತನ ಅಲೆದಾಟ ತಪ್ಪಿಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net