

ನರೇಗಲ್ಲ: ಕರ್ನಾಟಕ ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಮೂಲಕ ಎಲ್ಕೆಜಿ, 1-8ನೇ ತರಗತಿವರೆಗೆ ಉಚಿತ ಪ್ರವೇಶ ಸಂಬಂಧ, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ ಅರ್ಜಿ ಲಿಂಕ್ ಬಿಡುಗಡೆ ಮಾಡಿದೆ. ಮೇ 12 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಪಾಲಕರು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಆರ್ಟಿಇ ಆನ್ಲೈನ್ ಅರ್ಜಿ ಲಿಂಕ್ ಬಿಡುಗಡೆ ಮಾಡಿದೆ. ಪಾಲಕರು ತಮ್ಮ ಮಕ್ಕಳ ಪರವಾಗಿ ಆರ್ಟಿಇ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಮೇ 12 ರವರೆಗೆ ಸಲ್ಲಿಸಬಹುದಾಗಿದೆ. ಎಲ್ಕೆಜಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ ಆಗಿರಬೇಕು. 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು. ಹಾಗೂ ಗರಿಷ್ಠ 7 ವರ್ಷ ನಿಗದಿಪಡಿಸಲಾಗಿದೆ.
ನರೇಗಲ್ಲ ಪಪಂ ವ್ಯಾಪ್ತಿಯ ಎರಡು ಶಾಲೆಗಳಿಗೆ ಮಾತ್ರ ಎಲ್ಕೆಜಿಗೆ ಆರ್ಟಿಇ ಅರ್ಜಿ ಸಲ್ಲಿಸಲು ಅವಕಾಶವಿದೆ. ಪಪಂ ವ್ಯಾಪ್ತಿಯಲ್ಲಿ 17 ವಾರ್ಡ್ಗಳಿದ್ದು, ತಂತ್ರಾಂಶದಲ್ಲಿ 8 ವಾರ್ಡ್ಗಳು ಮಾತ್ರ ಲಭ್ಯವಿವೆ. ಲಭ್ಯವಿರದ ವಾರ್ಡ್ನ ಮಕ್ಕಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಇದು ರಾಜ್ಯಮಟ್ಟದಲ್ಲಿನ ಸಮಸ್ಯೆ ಅದನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಎನ್ನುತ್ತಾರೆ.
ಕಳೆದ ವರ್ಷವೂ ಇದೇ ಸಮಸ್ಯೆ ಆಗಿತ್ತು: ಪ್ರಸಕ್ತ ಸಾಲಿನಲ್ಲಿನಲ್ಲಿ ಎದುರಾಗಿರುವ ಸಮಸ್ಯೆ ಈ ಹಿಂದಿನ ಶೈಕ್ಷಣಿಕ ವರ್ಷದಲ್ಲೂ ಆಗಿತ್ತು. ಪಾಲಕರು ಅರ್ಜಿ ಸಲ್ಲಿಸಲು ಪರದಾಡಿದ್ದರು. ಈಗ ಅದು ಮತ್ತೇ ಮುಂದುವರಿದಿದ್ದು, ಶಿಕ್ಷಣ ಇಲಾಖೆ ನಿರ್ಲಕ್ಷ್ಮಿಸುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮಗಳನ್ನು ಆರ್ಟಿಇ ಅಡಿ ಅರ್ಜಿ ಸಲ್ಲಿಸಲು ಹೋದರೆ, ನಮ್ಮ ವಾರ್ಡ್ (13) ತಂತ್ರಾಂಶದಲ್ಲಿ ಇಲ್ಲ ಎನ್ನುತ್ತಿದ್ದಾರೆ. ಬೇರೆ ವಾರ್ಡ್ ಆಯ್ಕೆ ಮಾಡಿಕೊಂಡರೆ. ನಿಮ್ಮ ವಾರ್ಡ್ನ ವ್ಯಾಪ್ತಿಯಲ್ಲಿ ಯಾವುದೇ ಶಾಲೆಗಳಿಲ್ಲ ಎಂದು ತೋರಿಸುತ್ತಿದೆ. ಈ ಬಗ್ಗೆ ರೋಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿದರೆ, ಅದನ್ನು ಸರಿಪಡಿಸುವುದು ನಮ್ಮ ಕೈಯಲ್ಲಿಲ್ಲ. ಅದು ರಾಜ್ಯಮಟ್ಟದಲ್ಲಿ ಆಗುವಂತಹದು ಎನ್ನುತ್ತಿದ್ದಾರೆ. ಇದರಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಬೇಕು. | ಎಸ್.ಕೆ. ಮಡಿವಾಳರ ಪಾಲಕ, ನರೇಗಲ್ಲ ಆರ್ಟಿಇ ಅಡಿ ಅರ್ಜಿ ಸಲ್ಲಿಸುವ ತಂತ್ರಾಂಶದಲ್ಲಿ ಸಮಸ್ಯೆಯ ಬಗ್ಗೆ ಕಳೆದ ಬಾರಿಯೇ ಆರ್ಟಿಇ ಸೇಲ್ಗೆ ಪತ್ರ ಬರೆಯಲಾಗಿತ್ತು. ಈ ವರ್ಷ ಮತ್ತೇ ಅದೇ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಇಲಾಖೆಗೆ ಪತ್ರ ಬರೆದು ಸಮಸ್ಯೆಯ ಬಗ್ಗೆ ತಿಳಿಸಲಾಗುವುದು. | ಆರ್.ಎನ್. ಹುರಳಿ ಬಿಇಒ ರೋಣ