

ಗಂಗಾವತಿ: ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಖಾಸಗಿ ಶಾಲೆಗಳಲ್ಲಿನ ಆರ್‌ಟಿಇ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರು ಶಾಸಕ ಪರಣ್ಣ ಮುನವಳ್ಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಖಾಸಗಿ ಶಾಲೆಗಳ ಪ್ರತಿನಿಧಿಗಳೊಂದಿಗೆ ಶಾಸಕರ ಗೃಹ ಕಚೇರಿಗೆ ತೆರಳಿದ ಒಕ್ಕೂಟದ ಸದಸ್ಯರು ಆರ್‌ಟಿಇ ಆಯ್ಕೆಯಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಶುಲ್ಕ ಪಾವತಿಸುವಂತೆ ಒತ್ತಾಯಿಸಿದರು. ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಜಿ.ಶ್ರೀಧರ ಕೇಸರಹಟ್ಟಿ ಮಾತನಾಡಿ, ಆರ್‌ಟಿಇ ಯೋಜನೆಯಡಿ ಪ್ರವೇಶ ಪಡೆದ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಬೇಕಿದೆ. ಇದು ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿವೆ. ದೇಶದಲ್ಲಿ ಲಾಕ್‌ಡೌನ್ ಘೋಷಣೆಯಿಂದ ಶಾಲೆಗಳು ಬಂದ್ ಆಗಿವೆ. ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗೂ ಅವಕಾಶವಿಲ್ಲದಂತಾಗಿದೆ. ಶುಲ್ಕ ವಸೂಲಿಯಾಗದ ಕಾರಣ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸುವುದು ತೊಂದರೆಯಾಗಿದೆ. ಶಾಲಾ ನಿರ್ವಹಣೆ ವೆಚ್ಚ ತೂಗಿಸುವುದು ಸವಾಲಿನ ಕೆಲಸವಾಗಿದ್ದು, ಸರ್ಕಾರ ಬಾಕಿ ಉಳಿಸಿಕೊಂಡಿರುವ ಆರ್‌ಟಿಇ ಅನುದಾನ ಪಾವತಿಸಲು ನೆರವಾಗುವಂತೆ ಒತ್ತಾಯಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಎಚ್.ಪ್ರಭಾಕರ, ಉಪಾಧ್ಯಕ್ಷ ಕೆ.ಹೇಮಂತರಾಜ, ಕಾರ್ಯದರ್ಶಿ ನೇತ್ರಾಜ್ ಗುರುವಿನಮಠ, ಖಜಾಂಚಿ ನಾಗರಾಜ ಹಿರೇಮಠ, ಕಾನೂನು ಸಲಹೆಗಾರ್ತಿ ಶಾಹೀನ್ ಕೌಸರ್, ಸದಸ್ಯರಾದ ಹೇಮಾಸುಧಾಕರ, ನಿರುಪಾದಿ ಜೇಕಿನ್ ಇತರರು ಇದ್ದರು.