ಬ್ಯಾಂಕ್ ನಿವೃತ್ತ ಉದ್ಯೋಗಿ ಶವ ನದಿಯಲ್ಲಿ ಪತ್ತೆ

mng--24 july Kankanadi
Published on

ಮಂಗಳೂರು: ರಕ್ತದೊತ್ತಡ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ತೆರಳಿದ್ದ ಬ್ಯಾಂಕ್ ನಿವೃತ್ತ ಉದ್ಯೋಗಿಯ ಶವ ಭಾನುವಾರ ಆಡಂಕುದ್ರು ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.


ಕಣ್ಣೂರು ಚೆಕ್‌ಪೋಸ್ಟ್ ಬಳಿಯ ಬೀಡು ನಿವಾಸಿ ವಿಶ್ವನಾಥ (65) ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ರಕ್ತದೊತ್ತಡ ಪರೀಕ್ಷೆ ಮಾಡಿಸಲೆಂದು ವೈದ್ಯರ ಬಳಿ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರು. ಮಧ್ಯಾಹ್ನ 12.25ಕ್ಕೆ ಅವರ ಪತ್ನಿ ಕರೆ ಮಾಡಿದಾಗ ಸಂಬಂಧಿಕರಾದ ಸರೋಜಿನಿ ಅವರು ಕರೆ ಸ್ವೀಕರಿಸಿ ವಿಶ್ವನಾಥ ಅವರು ಮೊಬೈಲ್ ಹಾಗೂ ಪರ್ಸ್ ಇಟ್ಟು ನದಿಯ ಕಡೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಸಂದೇಹ ಬಂದು ನದಿಯ ಪರಿಸರದಲ್ಲಿ ಹುಡುಕಾಡಿ, ಸುತ್ತಮುತ್ತಲಿನ ಮನೆಯವರಲ್ಲಿ ವಿಚಾರಿಸಿದ್ದು, ಯಾವುದೇ ಸುಳಿವು ಸಿಗದೇ ಇದ್ದಾಗ ಕಂಕನಾಡಿ ನಗರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.


ನೀರಿಗೆ ಹಾರಿರುವ ಶಂಕೆಯಿಂದ ಭಾನುವಾರ ನದಿಯಲ್ಲಿ ಹುಡುಕಾಟ ನಡೆಸಿದ್ದು, ಈ ಸಂದರ್ಭ ಅವರ ಶವ ನೇತ್ರಾವತಿ ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣದಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net