

ರಾಮನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪ್ರಾರಂಭವಾಗಿ 95 ವರ್ಷ. ಸಂಘ ಆರಂಭಗೊಂಡ ನಂತರ ಸಂಘಟನೆಯತ್ತ ಪ್ರವಾಹೋಪಾದಿಯಲ್ಲಿ ರಾಷ್ಟ್ರಪ್ರೇಮವುಳ್ಳ ಯುವ ಜನರು ಆಕರ್ಷಿತರಾಗುದ್ದಾರೆ.
ದೇಶದ ಜಿಲ್ಲೆ, ತಾಲೂಕುಗಳಲ್ಲೂ ಸಂಘದ ಶಾಖೆಗಳ ಮೂಲಕ ದೇಶಕಟ್ಟುವ ಚಟುವಟಿಕೆಗಳು ನಿರಂತರವಾಗಿ ಸಾಗಿವೆ. ವಿದೇಶಗಳಲ್ಲೂ ಹಿಂದು ಸ್ವಯಂ ಸೇವಾ ಸಂಘದ ಹೆಸರಲ್ಲಿ ಆರ್‌ಎಸ್‌ಎಸ್ ಕಾರ್ಯಚಟುವಟಿಕೆ ವಿಸ್ತರಣೆಗೊಂಡಿದೆ. ಭಾರತವಲ್ಲದೆ ಜಗತ್ತಿನ 47 ರಾಷ್ಟ್ರಗಳಲ್ಲಿ ಸಾಮಾಜಿಕ ಸೇವೆಯಲ್ಲಿ ಸಮರ್ಪಿಸಿಕೊಂಡಿದೆ.
ಭಾರತದಲ್ಲಿ 56,500 ಆರ್‌ಎಸ್‌ಎಸ್ ಶಾಖೆಗಳಿದ್ದು, ಸರಿಸುಮಾರು 1 ಕೋಟಿ ಕಾರ್ಯಕರ್ತರಿದ್ದಾರೆ. ಶಿಕ್ಷಣ, ಆರೋಗ್ಯ, ಆರ್ಥಿಕ ಸಹಾಯ ಹಾಗೂ ಸ್ವಾವಲಂಬನೆ ವಿಷಯಗಳನ್ನಿಟ್ಟುಕೊಂಡು ಪ್ರಸ್ತುತ 1.80 ಲಕ್ಷಕ್ಕಿಂತ ಹೆಚ್ಚು ಸೇವಾ ಚಟುವಟಿಕೆ ನಡೆದಿದೆ ಮತ್ತು ನಡೆಯುತ್ತಿದೆ. ಬಿಬಿಸಿ ನಡೆಸಿರುವ ಸಮೀಕ್ಷೆಯಲ್ಲಿ ಆರ್‌ಎಸ್‌ಎಸ್ ಜಗತ್ತಿನ ಅತಿದೊಡ್ಡ ಸ್ವಯಂ ಸೇವಾ ಸಂಘ ಎಂಬ ಖ್ಯಾತಿಗೆ ಭಾಜನವಾಗಿದೆ.
ವ್ಯಕ್ತಿ ನಿರ್ಮಾಣದಿಂದ ಸಶಕ್ತ ರಾಷ್ಟ್ರ ನಿರ್ಮಾಣ ಧ್ಯೇಯದೊಂದಿಗೆ ಆರ್‌ಎಸ್‌ಎಸ್ ತೊಡಗಿಸಿಕೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಂತಹ ಅನೇಕ ನಾಯಕರನ್ನು ಆರ್‌ಎಸ್‌ಎಸ್ ರೂಪಿಸಿದೆ. ಆಧುನಿಕ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಸಂಘದ ಬೆಳವಣಿಗೆಯೂ ವೇಗವಾಗಿದೆ.
ವಿಶೇಷವಾಗಿ ಯುವಜನತೆ ಆರ್‌ಎಸ್‌ಎಸ್‌ನತ್ತ ಮುಖ ಮಾಡುತ್ತಿದ್ದು, ಸಂಘಟನೆಯಲ್ಲಿ ರಾಷ್ಟ್ರಭಕ್ತರನ್ನು, ಚಾರಿತ್ರೃವಂತರನ್ನು ಸೃಷ್ಟಿಸುವ ನಿರಂತರ ಯಾಗ ಮುಂದುವರಿಸಿದೆ. ಯುವಕರ ಸೆಳೆತಕ್ಕೆ ಟ್ವಿಟರ್, ಫೇಸ್‌ಬುಕ್‌ಗಳನ್ನು ಆರ್‌ಎಸ್‌ಎಸ್ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯ ವಿಚಾರಗಳನ್ನು ಪಸರಿಸುತ್ತ ಯುವಜನತೆಗೆ ಮತ್ತಷ್ಟು ಹತ್ತಿರವಾಗಿದೆ.
ಆರ್‌ಎಸ್‌ಎಸ್‌ನೊಂದಿಗೆ ಜಿಲ್ಲೆಯ ನಂಟು: ರಾಮನಗರ ಜಿಲ್ಲೆಗೂ ಆರ್‌ಎಸ್‌ಎಸ್‌ಗೂ ಸ್ವಾತಂತ್ರೃ ಪೂರ್ವದ ನಂಟಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಶಾಖೆ ಆರಂಭಗೊಂಡಿದ್ದು ಕನಕಪುರ ತಾಲೂಕಿನಿಂದ. 1945ರಲ್ಲಿ ಆರಂಭಗೊಂಡ ಶಾಖೆಯ ಮೂಲಕ ಹಲವಾರು ಪ್ರಚಾರಕರು ಸಂಘದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡರು. ಕನಕಪುರದಿಂದ ಎಸ್.ಶಿವರಾಂ, ಲಕ್ಷ್ಮೀನರಸಿಂಹ ಶಾಸ್ತ್ರಿ, ಗೋ.ಭೈರಪ್ಪ, ಕೆ.ವಿ.ಶ್ರೀಧರ್ ಪ್ರಮುಖರು. ನಂತರ 1946ರಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ, 1960ರ ದಶಕದಲ್ಲಿ ಮಾಗಡಿಯಲ್ಲೂ ಸಂಘದ ಶಾಖೆಗಳು ಪ್ರಾರಂಭವಾದವು. ರಾಮನಗರದ ದಾಸಪ್ಪರೆಡ್ಡಿ, ಕೃಷ್ಣಾಚಾರ್, ಚನ್ನಪಟ್ಟಣದ ರಾಮಚಂದ್ರ, ಗೋಪಾಲಕೃಷ್ಣ, ಎಂ.ಆರ್.ಭದ್ರಿನಾರಾಯಣಶೆಟ್ಟಿ, ಚಂದ್ರು, ಮಾಗಡಿಯ ಆಂಜನೇಯಗುಪ್ತ, ಕೇಶವಮೂರ್ತಿ, ಸದಾಶಿವಯ್ಯ ಸಂಘಕ್ಕಾಗಿ ಸಮರ್ಪಿಸಿಕೊಂಡ ಪ್ರಮುಖರು.
ದೇಶದ ಹಲವಾರು ಹೋರಾಟಗಳಲ್ಲೂ ಜಿಲ್ಲೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ. 1975ರ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲೆಯ ನೂರಾರು ಸ್ವಯಂ ಸೇವಕರು ಜೈಲುವಾಸ ಅನುಭವಿಸಿದ್ದರು. ನಂತರ 1989-92ರ ಅವಧಿಯಲ್ಲಿ ನಡೆದ ರಾಮರಥ ಯಾತ್ರೆ, ರಾಮದೀಪ ಜ್ಯೋತಿಯಾತ್ರೆಯಲ್ಲೂ ಜಿಲ್ಲೆಯ ಪ್ರತಿ ಹಳ್ಳಿಯ ನಿವಾಸಿಗಳು ಪಾಲ್ಗೊಳ್ಳುವ ಮೂಲಕ ಜಿಲ್ಲೆ 75 ವರ್ಷಗಳ ಒಡನಾಟವನ್ನು ಸಂಘದೊಂದಿಗೆ ಹೊಂದಿದೆ.
44 ರಾಷ್ಟ್ರಮಟ್ಟದ ಸಂಘಟನೆಗಳು: ಆರ್‌ಎಸ್‌ಎಸ್ ದೊಡ್ಡ ಆಲದ ಮರದಂತೆ. ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ರಾಷ್ಟ್ರಮಟ್ಟದ 44 ಕ್ಷೇತ್ರಗಳನ್ನು ಸ್ಥಾಪಿಸಿ ಮಾರ್ಗದರ್ಶನ ನೀಡುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ವಿಶ್ವ ಹಿಂದು ಪರಿಷತ್, ಹಿಂದು ಜಾಗರಣಾ ವೇದಿಕೆ, ಎಬಿವಿಪಿ, ಸಾಹಿತ್ಯ ಕ್ಷೇತ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜ್ದೂರ್ ಸಂಘ, ಕೃಷಿಕರಿಗಾಗಿ ಭಾರತೀಯ ಕಿಸಾಸ್ ಸಂಘ, ವನವಾಸಿಗಳಿಗಾಗಿ ವನವಾಸಿ ಕಲ್ಯಾಣ, ಸಂಸ್ಕೃತ ಭಾರತಿ, ಸಂಸ್ಕಾರ ಭಾರತಿ, ಆರೋಗ್ಯ ಭಾರತಿಯಂತಹ ಅನೇಕ ಕ್ಷೇತ್ರಗಳಲ್ಲಿ ಲಕ್ಷಾಂತರ ಮಂದಿ ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ.
5 ಸಾವಿರ ಕಾರ್ಯಕರ್ತರು ಭಾಗಿ: ರಾಮನಗರದಲ್ಲಿ ನಡೆಯುವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು ಎಲ್ಲ ತಾಲೂಕುಗಳಿಂದ ಸುಮಾರು 5 ಸಾವಿರ ಗಣವೇಷಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ರಾಮನಗರದ ಹಳ್ಳಿ ಹಳ್ಳಿಗಳಿಂದಲೂ ಗಣವೇಷಧಾರಿಗಳು ಆಗಮಿಸಲಿದ್ದು, ಇದರ ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸುವ ಸಾಧ್ಯತೆ ಇದೆ.
ಸಂಘ ಮಿತ್ರದಲ್ಲಿ ಗಣವೇಷ ಲಭ್ಯ: ರಾಮನಗರದ ಕಾಮನಗುಡಿ ವೃತ್ತದಲ್ಲಿರುವ ಆರ್‌ಎಸ್‌ಎಸ್ ಜಿಲ್ಲಾ ಕಾರ್ಯಾಲಯ ‘ಸಂಘಮಿತ್ರ’ದಲ್ಲಿ ಗಣವೇಷ ಲಭ್ಯವಿದೆ. ಪಥ ಸಂಚಲನದಲ್ಲಿ ಭಾಗವಹಿಸಲು ಬಯಸುವ ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಪಡೆಯಬಹುದು. ಮಾಹಿತಿಗೆ ಹೊನ್ನಪ್ಪ ಅವರನ್ನು 9902739923ರಲ್ಲಿ ಸಂಪರ್ಕಿಸಿ.
ಸಿಂಗಾರಗೊಂಡಿದೆ ರಾಮನಗರ: ಪಥಸಂಚಲನಕ್ಕೆ ರಾಮನಗರ ಸಿಂಗಾರಗೊಂಡಿದೆ. ಪಥ ಸಂಚಲನ ಸಾಗುವ ದಾರಿ ಸಂಪೂರ್ಣವಾಗಿ ಕೇಸರಿ ಮಯವಾಗಿದ್ದು, ಕೇಸರಿ ತೋರಣಗಳು ಸರ್ವರನ್ನೂ ಸ್ವಾಗತಿಸುತ್ತಿವೆ.
ಭಟ್ಟರ ಪ್ರಖರ ಭಾಷಣ: ಭಾನುವಾರದ ಪಥ ಸಂಚಲನದ ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ.ಕಲ್ಲಡ್ಕ ಪ್ರಭಾಕರ್‌ಭಟ್ ಅವರ ಪ್ರಖರ ಭಾಷಣ ಇದೆ.
ಪಥ ಸಂಚಲನದ ಮಾರ್ಗ: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಫೆ.9ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಗಣವೇಷದಲ್ಲಿರುವ ಸ್ವಯಂಸೇವಕರ ಎರಡು ಗುಂಪುಗಳ ಪಥ ಸಂಚಲನ ಸಮಾವೇಶಗೊಳ್ಳಲಿದೆ. ಇದಕ್ಕೂ ಮುನ್ನ ಪಥ ಸಂಚಲನ ಎರಡು ಮಾರ್ಗಗಳಲ್ಲಿ ಸಂಚಾರ ಮಾಡಲಿದೆ. ಮಾರ್ಗ 1: ಬಾಲಗೇರಿ ಶಾಲಾ ಆವರಣ, ಟೌನ್ ಠಾಣೆ, ಬಂಡಿ ಮಾಂಕಾಳಮ್ಮ ವೃತ್ತ ಮಾರ್ಗ2: ಕೆಂಪೇಗೌಡ ವೃತ್ತ, ಬೆಂಗಳೂರು-ಮೈಸೂರು ರಸ್ತೆ, ಖಾಸಗಿ ಬಸ್ ನಿಲ್ದಾಣ, ಬಂಡಿ ಮಾಂಕಾಳಮ್ಮ ವೃತ್ತ ಮಾರ್ಗಗಳಲ್ಲಿ ಬರುವ ಗಣ ವೇಷಧಾರಿಗಳ ಪಥ ಸಂಚಲನ ಮಧ್ಯಾಹ್ನ 3.30ಕ್ಕೆ ಬಂಡಿ ಮಾಂಕಾಳಮ್ಮ ವೃತ್ತದಲ್ಲಿ ಸಂಗಮಗೊಂಡು ಜೂನಿಯರ್ ಕಾಲೇಜು ಮೈದಾನದ ಕಡೆಗೆ ಸಾಗಲಿದೆ.
ಭಾನುವಾರ ರಾಮನಗರ ಜಿಲ್ಲೆಯ ಇತಿಹಾಸದಲ್ಲಿಯೇ ಆರ್‌ಎಸ್‌ಎಸ್‌ನ ಬೃಹತ್ ಪಥ ಸಂಚಲನ ನಡೆಯಲಿದ್ದು, ಪಕ್ಷಾತೀತವಾಗಿ ದೇಶಭಕ್ತರು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಥ ಸಂಚಲನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಎಂ.ರುದ್ರೇಶ್ ಜಿಲ್ಲಾಧ್ಯಕ್ಷರು, ಬಿಜೆಪಿ, ರಾಮನಗರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದೇಶ ಕಟ್ಟುವ ಕಾರ್ಯದಲ್ಲಿ ಆರ್‌ಎಸ್‌ಎಸ್ ತೊಡಗಿಸಿಕೊಂಡಿದ್ದು, ಪ್ರತಿಯೊಬ್ಬರೂ ಇಂತಹ ಮಹಾನ್ ಸಂಘಟನೆ ಯಲ್ಲಿ ಪಾಲುದಾರರಾಗಬೇಕು. ಇದಕ್ಕೆ ಉತ್ತಮ ಅವಕಾಶ ಒದಗಿಬಂದಿದ್ದು, ಭಾನುವಾರ ನಡೆಯುವ ಪಥ ಸಂಚಲನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ವರದರಾಜುಗೌಡ ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ರಾಮನಗರದಲ್ಲಿ ಭಾನುವಾರ ದೇಶಭಕ್ತರ ಹಬ್ಬ ನಡೆಯಲಿದ್ದು ಪ್ರತಿಯೊಬ್ಬ ದೇಶ ಭಕ್ತರೂ ಪಥ ಸಂಚಲನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಕಾಡನಕುಪ್ಪೆ ರಾಘವೇಂದ್ರ ಸದಸ್ಯರು, ರಾಮನಗರ ಅಭಿವೃದ್ಧಿ ಪ್ರಾಧಿಕಾರ