

ತಾಳಿಕೋಟೆ: ಇಡೀ ದೇಶವನ್ನು 99 ವರ್ಷಗಳಿಂದ ಸಂಘಟಿಸುವ ಹಾಗೂ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತ ಸಾಗಿರುವುದು ಸ್ಮರಣೀಯವಾಗಿದೆ ಎಂದು ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಣಿ ಸದಸ್ಯ ಸತೀಶ ಕುಮಾರ ಹೇಳಿದರು.
ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ನಿಮಿತ್ತವಾಗಿ ಶನಿವಾರ ಏರ್ಪಡಿಸಿದ್ದ ಪಥ ಸಂಚಲನದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಂಘ ಸ್ಥಾಪನೆಯಾಗಿ 100 ವರ್ಷಗಳಾಗುತ್ತಿದೆ. ಸಂಘದ ಸಂಸ್ಥಾಪನ ದಿನವೆನ್ನುವುದು ವಿಜಯದಶಮಿ ದಿನವಾಗಿದೆ. ಇದನ್ನು ಪ್ರತಿವರ್ಷವೂ ಇಡೀ ಜಗತ್ತಿನಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತೀಯ ಜೀವನ ಪದ್ಧತಿಯಲ್ಲಿ ಪರಿಹಾರವಿದೆ. ಸಾಮರಸ್ಯದಿಂದ ಬಾಳುವುದು, ಪರಿಸರ ಸಂರಕ್ಷಣೆ ಸೇರಿ ಹಲವು ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ದೇಶವನ್ನು ಮುನ್ನಡೆಸಬೇಕಾಗಿದೆ ಎಂದರು.
ಇಡೀ ದೇಶದಲ್ಲಿ ಆರ್.ಎಸ್.ಎಸ್ ಸಂಘದ ಶಾಖೆಗಳು ಏಳು ಲಕ್ಷಕ್ಕೂ ಅಧಿಕವಾಗಿವೆ. ಸಂಘವು ವೈಯಕ್ತಿಕ ಹಿತಾಸಕ್ತಿಯನ್ನು ಎಂದೂ ಬಯಸಿಲ್ಲ. ದೇಶ ಕಾಪಾಡುವಂತಹ ಕಾರ್ಯಕ್ಕೆ ಈ ಹಿಂದಿನಿಂದಲೂ ತನ್ನ ಸೇವಾಕಾರ್ಯ ಚಟುವಟಿಕೆಗಳೊಂದಿಗೆ ಮುಂದುವರಿದಿದೆ ಎಂದರು.
ಇಗ್ಲೆಂಡ್‌ನಲ್ಲಿ ಸಂಘದ ಶಾಖೆ ಪ್ರಾರಂಭಿಸಿದಾಗ 50ನೇ ವರ್ಷದ ಸಮಾರಂಭದಲ್ಲಿ ಅಲ್ಲಿಯ ಮಹಾರಾಣಿ ಸಂಘದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಸಂಘದ ನಡೆನುಡಿಗಳನ್ನು ತಮ್ಮ ದೇಶದ ಜನತೆಗೆ ಕಲಿಸುವಂತಹ ಕಾರ್ಯಆಗಬೇಕಾಗಿದೆ ಎಂದಿದ್ದಾರೆ ಎಂದರು.
ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ರಾಜವಾಡೆಯಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ವಿಜಯಪುರ ವಿಭಾಗ ಸಂಚಾಲಕ ಚಿದಂಬರ ಕರಮರಕರ, ಪಥ ಸಂಚಲನದ ಉಸ್ತುವಾರಿ ಪ್ರಕಾಶ ಕಟ್ಟಿಮನಿ, ದಿನಕರ ಜೋಶಿ, ಸಂಗಮೇಶ ಮದರಕಲ್ಲ, ಚಂದ್ರಶೇಖರ ದೊಡಮನಿ, ಪ್ರತೀಕ ಕುಲಕರ್ಣಿ, ಸಂಗಮೇಶ ಪಾಲ್ಕಿ, ಋಷಿಕೇಶ ಗೊಟಗುಣಕಿ, ಆಕಾಶ ಪಿಂಪಳೆ, ತಿಲಕ ಬಯಾಸ, ಮಲ್ಲಿಕಾರ್ಜುನ ಹಿಪ್ಪರಗಿ, ಶಾಮ ಹಂಚಾಟೆ, ರಾಘವೇಂದ್ರ ಬಿಜಾಪೂರ, ಪ್ರಮೋದ ಅಗರವಾಲ, ರಾಜಣ್ಣ ಸೊಂಡೂರ, ಆರ್.ಎಸ್. ಪಾಟೀಲ ಕೂಚಬಾಳ, ರಾಜು ಹಂಚಾಟೆ, ಯಲ್ಲೇಶ ಧಾಯಪುಲೆ, ರಾಜು ಅಲ್ಲಾಪೂರ ಇತರರಿದ್ದರು.
ದೀಪಕ ಕುಲಕರ್ಣಿ ಪ್ರಾರ್ಥಿಸಿದರು. ಬಸವನಗೌಡ ಪಾಟೀಲ ಸ್ವಾಗತಿಸಿದರು. ತಿಪ್ಪಾರೆಡ್ಡಿ ವಂದಲಿ ವೈಯಕ್ತಿಕ ಗೀತೆ ಹಾಡಿದರು. ಪ್ರದೀಪ ಭುಸಾರೆ ವಂದಿಸಿದರು.