

ರೋಣ: ದೇಶ ಶ್ರೀಮಂತವಾದಂತೆ ದೇಶವನ್ನು ರಕ್ಷಿಸಿಕೊಳ್ಳುವುದು, ಕಾಯುವುದು ಅವಶ್ಯವಾಗಿದೆ. ದೇಶವನ್ನು ಕಾಯಲು ಸೈನಿಕರ ಅವಶ್ಯಕತೆ ಬಹಳ ಮುಖ್ಯವಾಗಿದೆ. ದೇಶದ ಗಡಿ ಕಾವಲಿಗೆ ಯುವಕರು ಮುಂದಾಗಬೇಕು ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ರವೀಂದ್ರ ಹೇಳಿದರು.
ಇಟಗಿ ಗ್ರಾಮದಲ್ಲಿ ಜೈ ನರೇಂದ್ರ ಯುವಜನಹಿತ ಸಂಸ್ಥೆ, ಅನ್ನದಾನೇಶ್ವರ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಅಗ್ನಿವೀರರ ಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬಡವ ತನ್ನ ಮನೆಯಲ್ಲಿ ಬೆಲೆಬಾಳುವ ವಸ್ತು ಇರದಿದ್ದರೂ ಮನೆಗೆ ಬೀಗ ಹಾಕಿ ಹೋಗುತ್ತಾರೆ. ಶ್ರೀಮಂತರು ಹಣ, ಬಂಗಾರ, ಬೆಳ್ಳಿ ಸುರಕ್ಷಿತವಾಗಿಡಲು ಡಿಜಿಟಲ್ ಲಾಕರ್ ಅಳವಡಿಸಿರುತ್ತಾರೆ. ಹಾಗೆಯೇ ದೇಶವನ್ನೂ ಸುರಕ್ಷಿವಾಗಿಡುವುದೂ ಅಷ್ಟೇ ಮುಖ್ಯ ಎಂದು ಹೇಳಿದರು.
ಹಾಲಕೇರಿಯ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸೇನೆ ನೇಮಕಾತಿಯ ತರಬೇತಿ ಪಡೆದ ಯುವಕರು ಜೀವನದಲ್ಲಿ ಉತ್ತಮ ಸಾಧನೆ ಮಾಡಿ, ದೇಶ ಸೇವೆಗೆ ಮುಂದಾಗಬೇಕು. ನಿಸ್ವಾರ್ಥ ಗುಣದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ತರಬೇತಿ ಆಯೋಜಕರಾದ ದೇವರಾಜ ದೇಸಾಯಿ, ವಿಜಯಕುಮಾರ ಸರದೇಸಾಯಿ, ಅಶೋಕ ಕಟ್ಟಿಮನಿ, ನಾಗೇಶ ಪಲ್ಲೇದ, ಮಹೇಶ ಸಂದಿಮನಿ, ಬಸವರಾಜ ಸಜ್ಜನ, ಬಸಯ್ಯ ಹಿರೇಮಠ, ಬಸವರಾಜ ಕೋಮಾರ, ಇತರರಿದ್ದರು.