

ಬೆಂಗಳೂರು: ಬಾಂಗ್ಲಾದೇಶದ ಹಿಂದು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಇದು ಮಾನವಹಕ್ಕು ಉಲ್ಲಂಘನೆಯ ಸ್ಪಷ್ಟ ನಿದರ್ಶನ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಸೇರಿ ಜಾಗತಿಕ ಮಟ್ಟದ ವೇದಿಕೆಗಳ ಮೂಲಕ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂಬ ನಿರ್ಣಯವನ್ನು ಅಖಿಲ ಭಾರತ ಪ್ರತಿನಿಧಿ ಸಭಾ (ಎಬಿಪಿಎಸ್) ದಲ್ಲಿ ಕೈಗೊಳ್ಳಲಾಗಿದೆ.
ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಎಬಿಪಿಎಸ್‌ನ 2ನೇ ದಿನವಾದ ಶನಿವಾರ ಈ ನಿರ್ಣಯ ಅಂಗೀಕರಿಸಲಾಗಿದೆ. ಬಾಂಗ್ಲಾ ಹಿಂದು ಸಮುದಾಯದ ಬೆಂಬಲಕ್ಕೆ ನಿಲ್ಲಲು ವಿಶ್ವದ ಎಲ್ಲ ದೇಶಗಳು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂಬ ಸಂದೇಶ ರವಾನಿಸಿದೆ.
ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಅರುಣ್‌ಕುಮಾರ್, ಬಾಂಗ್ಲಾದೇಶದಲ್ಲಿ ಮುಸ್ಲಿಂ ಮತಾಂಧರಿಂದ ಹಿಂದು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಮೇರೆ ಮೀರಿದ ಹಿಂಸಾಚಾರ ನಡೆದಿವೆ. ಜತೆಗೆ ಭಾರತ ವಿರೋಧ ಧೋರಣೆಯ ಕಿಚ್ಚು ಎರಡೂ ರಾಷ್ಟ್ರಗಳ ಸಂಬಂಧಕ್ಕೆ ತೀವ್ರ ಧಕ್ಕೆ ತಂದೊಡ್ಡಿದೆ. 1951ರಲ್ಲಿದ್ದ ಶೇ.22 ಹಿಂದುಗಳ ಸಂಖ್ಯೆ ಈಗ ಶೇ.7.95ಕ್ಕೆ ಇಳಿದಿದೆ. ಇದು ಕಳವಳಕಾರಿ ಸಂಗತಿ ಆಗಿರುವ ಜತೆಗೆ, ಭಾರತದ ನೆರೆಹೊರೆಯಲ್ಲಿ ಅಸ್ಥಿರತೆಯ ವಾತಾವರಣ ಮೂಡಿಸುವಲ್ಲಿ ಕೆಲ ಜಾಗತಿಕ ಶಕ್ತಿಗಳು ನಿರತವಾಗಿವೆ. ಈ ಕಾಣದ ಕೈಗಳ ಬಗ್ಗೆ ಜಾಗತಿಕ ಮಟ್ಟದ ಚಿಂತನಾಶೀಲ ನಾಯಕರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ನೇರ ಕ್ರಮ ಇಲ್ಲ:
ಬಾಂಗ್ಲಾ ಹಿಂದುಗಳ ಮೇಲಿನ ದೌರ್ಜನ್ಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದನಿ ಎತ್ತಿ ಬೆಂಬಲ ಪಡೆಯುವ ಕಾರ್ಯ ಕೈಗೊಂಡಿರುವುದು ಸಮಾಧಾನ ತಂದಿದೆ. ಇದರ ಜತೆಗೆ ಇನ್ನಷ್ಟು ಪ್ರಯತ್ನ ಮುಂದುವರಿಸಬೇಕಿದೆ. ಆದರೆ, ಬಾಂಗ್ಲಾ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಅಥವಾ ಮಿಲಿಟರಿ ಕಾರ್ಯಾಚರಣೆ ಅಂತಹ ನೇರ ಕ್ರಮ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಧ್ಯಕ್ಷರ ಆಯ್ಕೆಗೆ ಬಿಜೆಪಿ ಸ್ವತಂತ್ರ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಮಾರ್ಗದರ್ಶನ ಕೋರಿದ್ದಲ್ಲಿ ಮಾತ್ರ ಸಲಹೆ ನೀಡಲಾಗುವುದು. ಈ ವಿಚಾರದಲ್ಲಿ ಪದೇ ಪದೆ ಸಂಘವು, ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಮಾತನ್ನು ಅವರು ತಳ್ಳಿಹಾಕಿದರು.
ರಾಜಕೀಯ ಅಜೆಂಡ:
ಲೋಕಸಭೆಯ ಸ್ಥಾನಗಳ ಸಂಬಂಧ ಕ್ಷೇತ್ರ ಪುನರ್ವಿಂಗಡಣೆ ವಿಚಾರವಾಗಿ ಕೆಲ ಪಕ್ಷಗಳು ಚೆನ್ನೈನಲ್ಲಿ ಸಭೆ ಸೇರಿ ಚರ್ಚಿಸಿವೆ. ಇದು ಆ ಪಕ್ಷಗಳಿಗೆ ಬಿಟ್ಟ ವಿಚಾರ. ಕ್ಷೇತ್ರ ಪುನರ್ವಿಂಗಡಣೆಗೆ ಅಧಿಸೂಚನೆ ಅಥವಾ ಮಾರ್ಗಸೂಚಿ ಹೊರಡಿಸದಿದ್ದರೂ, ಊಹೆ ಮಾಡಿ ಹೀಗೆಯೇ ಆಗುತ್ತದೆ ಎಂದು ಹೇಳುವುದು ರಾಜಕೀಯ ಅಜೆಂಡಾವೇ ಹೊರತು ಮತ್ತೇನಲ್ಲ. ಈ ವಿಚಾರವಾಗಿ ಸಂಘವು ಹೆಚ್ಚೇನೂ ಹೇಳಲು ಇಷ್ಟಪಡದು ಎಂದು ಅರುಣ್‌ಕುಮಾರ್ ಪ್ರತಿಕ್ರಿಯಿಸಿದರು.
ಮಹಿಳೆಯರ ಪಾತ್ರ ಹಿರಿದು:
ಸಂಘ ಕಾರ್ಯ ಹಾಗೂ ಸೇವಾ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಹಿರಿದಿದೆ. ಹಿಂದನ ವರ್ಷ ಆಚರಿಸಲ್ಪಟ್ಟ ಅಹಲ್ಯಾಬಾಯಿ ಹೋಳ್ಕರ್ 300ನೇ ವರ್ಷಾಚರಣೆ ವೇಳೆ ದೇಶಾದ್ಯಂತ 472 ಸ್ಥಳಗಳಲ್ಲಿ 22 ಸಾವಿರ ಕಾರ್ಯಕ್ರಮ/ಸಮಾವೇಶ ನಡೆದಿವೆ. ಅವುಗಳಲ್ಲಿ ಒಟ್ಟು 5.77 ಲಕ್ಷ ಸ್ತ್ರೀಯರು ಪಾಲ್ಗೊಂಡು ನಾರೀಶಕ್ತಿ ಪ್ರದರ್ಶಿಸಿದ್ದಾರೆ. ಸಂಘವು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ ಎಂದರು.
ಶತಾಬ್ದಿ ಯೋಜನೆ ಪ್ರಕಟ ಇಂದು:
ಆರ್‌ಎಸ್‌ಎಸ್‌ಗೆ ಮುಂಬರುವ ವಿಜಯದಶಮಿಯಂದು 100 ವರ್ಷ ತುಂಬಲಿದೆ. ಈ ನಿಟ್ಟಿನಲ್ಲಿ ಮುಂದಿನ ಒಂದು ವರ್ಷ ದೇಶಾದ್ಯಂತ ಸಂಘಕಾರ್ಯ ವಿಸ್ತರಣೆ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕಾಗಿ ಎಬಿಪಿಎಸ್‌ನ ಬೈಠಕ್‌ನಲ್ಲಿ ಚಿಂತನ-ಮಂಥನ ನಡೆದಿದ್ದು, ಭಾನುವಾರ (ಮಾ.23) ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಜತೆಗೆ ವೀರಾಗ್ರಣಿ ರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಸ್ಮರಿಸಲು ವಿಶೇಷ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ.