

ಹುಬ್ಬಳ್ಳಿ: ಅತ್ಯಂತ ಸಂಪತ್ಭರಿತವಾಗಿದ್ದ ಪ್ರಾಚೀನ ಭಾರತವು ವಿದೇಶಿ ದಾಳಿಯಿಂದಾಗಿ ಗುಲಾಮಗಿರಿಗೆ ತಳ್ಳಲ್ಪಟ್ಟಿತ್ತು, ಈ ದೇಶದ ಅಂತಃಶಕ್ತಿಯನ್ನು ಅರಿತಿದ್ದ ಕೇಶವ ಬಲಿರಾಮ ಹೆಡಗೆವಾರ್ ಅವರು ರಾಷ್ಟ್ರಭಕ್ತಿ ಜಾಗೃತಗೊಳಿಸುವ ಸಲುವಾಗಿ ಸಂಘ ಸ್ಥಾಪನೆ ಮಾಡಿದರು, ಅದು ಈಗ ಹಂತಹಂತವಾಗಿ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಸುಮಾರು 83ಸಾವಿರ ಶಾಖೆಗಳಾಗಿ ಪಸರಿಸಿದೆ ಎಂದು ಆರ್ ಎಸ್ ಎಸ್ ದೆಹಲಿ ಸಹ ಸರಕಾರ್ಯವಾಹ ಕೃಷ್ಣಗೋಪಾಲ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಹಾನಗರ ವತಿಯಿಂದ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ಭಾನುವಾರ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ ನೀಡಿದರು.
ಸಂಘ ಸ್ಥಾಪಿಸುವುದರ ಹಿಂದೆ ಬಹುದೊಡ್ಡ ಚಿಂತನೆ ಅಡಗಿತ್ತು. ಪರಾಧೀನವಾಗಿದ್ದ ದೇಶವನ್ನು ಸ್ವತಂತ್ರ, ಸ್ವಾಭಿಮಾನದ ರಾಷ್ಟ್ರ ಮಾಡುವ ಆಶಯ ಇತ್ತು. ಧರ್ಮ, ಜಾತಿ, ಪಂತಗಳ ಹೆಸರಿನಲ್ಲಿ ವಿಭಜನೆಯಾಗಿದ್ದ ದೇಶ ಒಗ್ಗೂಡಿಸುವ ಸದಾಶಯ ಇತ್ತು. ನೂರು ವರ್ಷಗಳ ಸಂಘವು ಇದರ ಜಾರಿಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಇನ್ನಷ್ಟು ವೇಗ ನೀಡಿ, ಸಮಾಜದಲ್ಲಿ ಐಕ್ಯತೆ ಮೂಡಿಸುವ ಕೆಲಸ ಮಾಡುತ್ತದೆ ಎಂದರು.
ಸಂಘದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಇದನ್ನು ಮುಗಿಸುವ ಷಡ್ಯಂತ್ರಗಳು ದೇಶದಲ್ಲಿ ನಡೆಯುತ್ತಿವೆ. ಅನೇಕ ಕಾರ್ಯಕರ್ತರನ್ನು ಜೈಲಿಗೆ ಕಳಿಸಲಾಯಿತು. ಆದರೂ, ಸಂಘ ಒಂದು ಶಕ್ತಿಯಾಗಿ ನಿಂತಿದ್ದು, ದೇಶವನ್ನು ಪ್ರಗತಿ ಪಥದಲ್ಲಿ ನಿಲ್ಲಿಸುವ ಪಣ ತೊಟ್ಟಿದೆ. ಸಮಾಜ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸೇವೆಗಾಗಿ ಬದುಕಿದ ಸಂಘ:
ಮುಖ್ಯಅತಿಥಿಯಾಗಿದ್ದ ಶ್ರೀ ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವಿರ ಮುಂಗರವಾಡಿ, ದೇಶ ಸೇವೆಗಾಗಿಯೇ ಬದುಕಿದ ಸಂಘ ಎಂದರೆ ಅದು ಆರ್ ಎಸ್ ಎಸ್. ಅಧರ್ಮದ ಮೇಲೆ ವಿಜಯ ಸಾಧಿಸಿದ ದಿನ ವಿಜಯದಶಮಿಯಂದು ಹುಟ್ಟಿದ ಸಂಘದ ಶಿಸ್ತು, ಏಕತೆ, ಸಂಸ್ಕೃತಿಗಳು ಸಂಘಟಿತ ಶಕ್ತಿಯ ಸಂಕೇತವಾಗಿವೆ. ದೇಶದ ಸ್ವಾತಂತ್ರ್ಯ ಸುಲಭದ ತುತ್ತಾಗಿರಲಿಲ್ಲ. ಆ ಸಂದರ್ಭದಲ್ಲಿ ಸಂಘವು ದೇಶದ ಜನರಿಗೆ ಪ್ರೇರಣೆ ನೀಡಿತು. ಸಮರ್ಪಣಾ ಭಾವವನ್ನು ಕಲಿಸುತ್ತ ಬಂದಿದೆ. ಅನೇಕ ನಾಯಕರನ್ನು ದೇಶಕ್ಕೆ ನೀಡಿತು ಎಂದರು.
ಪ್ರಾಂತ ಸಂಘ ಚಾಲಕ ಬಸವರಾಜ ಡಂಬಳ, ಧಾರವಾಡ ವಿಭಾಗ ಸಂಘ ಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಮಹಾನಗರ ಸಂಘ ಚಾಲಕ ಶಿವಾನಂದ ಆವಟಿ, ಅನಂತಪದ್ಮನಾಭ ಐತಾಳ, ಶಂಕರಣ್ಣ ಮುನವಳ್ಳಿ, ಭಾಸ್ಕರ ಜಿತೂರಿ, ವಿಶ್ವನಾಥ ಹಿರೇಗೌಡರ, ಇತರ ಗಣ್ಯರು ವೇದಿಕೆ ಮೇಲಿದ್ದರು. ಮಹಾನಗರ ಕಾರ್ಯವಾಹ ಮಲ್ಲಿಕಾರ್ಜುನಪ್ಪ ಹಳೇಮನಿ ಪರಿಚಯಿಸಿದರು.