ಪ್ರಯತ್ನದಿಂದ ಜೀವನ ಆನಂದಮಯ

rss mar 20
Published on

ಬೆಂಗಳೂರು/ಯಶವಂತಪುರ: ಸತತ ಪ್ರಯತ್ನ ಬಲದಿಂದ ಜೀವನವನ್ನು ಆನಂದಮಯ ಗೊಳಿಸಿಕೊಳ್ಳಲು ಸಾಧ್ಯ ಎಂದು ಆರೆಸ್ಸೆಸ್ ಸರಸಂಘಚಾಲಕ  ಡಾ. ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೊರವಲಯದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದ ವಸತಿ ಸಮುಚ್ಚಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪ್ರಯತ್ನದಿಂದ ಸಾಧನೆ ಹೆಚ್ಚಾಗುತ್ತದೆ. ಆನಂದವೂ ಪ್ರಾಪ್ತಿಯಾಗುತ್ತದೆ. ಸತತ ಪರಿಶ್ರಮದ ಮೂಲಕ ಎಲ್ಲ ಕಾರ್ಯಗಳೂ ಸಿದ್ಧಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.

ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು. ವೃತ್ತಿಪರತೆ ಉತ್ಕೃಷ್ಟತೆಯಿಂದ ಕೂಡಿದಾಗ ಮಾತ್ರ ಅದು ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಾವು ಮಾಡುವ ಕೆಲಸ ದೇವರ ಕೆಲಸ ಎಂದು ಭಾವಿಸಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಶ್ರದ್ಧೆ , ಭಕ್ತಿ, ನಿಷ್ಠೆಗಳನ್ನು ಆಳವಡಿಸಿಕೊಂಡಾಗ ಜೀವನ ಆನಂದಮಯವಾಗಿರುತ್ತದೆ. ಇದರೊಂದಿಗೆ ದೇಶವೂ ಸುಭಿಕ್ಷವಾಗಿರುತ್ತದೆ ಎಂದರು.

ಮುದ್ದೇನಹಳ್ಳಿ ಶ್ರೀಸತ್ಯಸಾಯಿ ಗ್ರಾಮದ ಆಧ್ಯಾತ್ಮಿಕ ಚಿಂತಕ ಮಧುಸೂದನ ಸಾಯಿಜಿ ಮಾತನಾಡಿ, ದೇಗುಲಕ್ಕಿಂತ ವಿದ್ಯಾಲಯದಲ್ಲಿ ದೇವರ ದರ್ಶನ ಸಾಧ್ಯ ಎಂದರು. ಅಜ್ಞಾನದಿಂದ ಸುಜ್ಞಾನದೆಡೆ ಕೊಂಡೊಯ್ಯುವಲ್ಲಿ ವಿದ್ಯಾಕೇಂದ್ರಗಳ ಪಾತ್ರ ಮುಖ್ಯ. ಭಾರತದ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಅವುಗಳ ಮೇಲಿದೆ. ಶಿಕ್ಷಣದಿಂದಲೇ ಎಲ್ಲ ಪರಿಹಾರ ಸಾಧ್ಯ ಎಂದರು.

ಸಿಎಂ ಯಡಿಯೂರಪ್ಪ, ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಬಿ.ಎ. ಬಸವರಾಜ, ಎಸ್.ಟಿ. ಸೋಮಶೇಖರ್, ಕೇಂದ್ರ ಸಚಿವ ಸದಾನಂದ ಗೌಡ, ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ನಡೆದು ಬಂದ ದಾರಿ ಮರೆಯಬಾರದು

ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದು ಬಂದ ದಾರಿಯನ್ನು ಮರೆಯಬಾರದು ಎಂದ ಮೋಹನ್ ಭಾಗವತ್ ಹೇಳಿದರು. ಆರ್​ಎಸ್​ಎಸ್ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ಇಂದಿನವರೆಗೂ ಇದರಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ ಎಂದರು. ಎಲ್ಲರೂ ಸಮಾನ ಮನಸ್ಥಿತಿಯಲ್ಲಿ, ಒಂದೇ ದಿಕ್ಕಿನಡೆಗೆ ಒಗ್ಗೂಡಿ ನಡೆದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರಿದವರನ್ನು ನೋಡಿ ಅಸೂಯೆ ಪಡುವುದರಿಂದ ಮನುಷ್ಯನ ಏಳಿಗೆ ಅಸಾಧ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net