ಆರ್‌ಎಸ್‌ಎಸ್ ಮುಖಂಡನ ಮೇಲೆ ಹಲ್ಲೆ

rss
Published on

ಧಾರವಾಡ: ಮನೆಯ ಕಟ್ಟೆ ಮೇಲೆ ಕೂಡಬೇಡಿ ಎಂದಿದ್ದಕ್ಕೆ ಕೆಲವು ಯುವಕರು ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಶ್ರೀಶ ಬಳ್ಳಾರಿ ಅವರ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ನಗರದ ಮಂಗಳವಾರಪೇಟೆಯ ಹಳೇ ತಾಲೂಕು ಕಚೇರಿ ಓಣಿಯಲ್ಲಿ ಜರುಗಿದೆ. ಕಟ್ಟೆ ಮೇಲೆ ಕುಳಿತು ಜೋರಾಗಿ ಮಾತನಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಯುವಕರು ಶ್ರೀಶ ಹಾಗೂ ಅವರ ಕುಟುಂಬಸ್ಥರ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದಾರೆ.

ಏನಿದು ಪ್ರಕರಣ?: ಹೆಬ್ಬಳ್ಳಿ ಅಗಸಿ ಪ್ರದೇಶದವರು ಎನ್ನಲಾದ ಅನ್ಯಕೋಮಿನ ಯುವಕರ ಗುಂಪು ಮಂಗಳವಾರಪೇಟೆ ಓಣಿಗಳ ಮನೆಗಳ ಕಟ್ಟೆಯ ಮೇಲೆ ಪ್ರತಿದಿನ ಕೂಡುತ್ತಿತ್ತು. ಬಳ್ಳಾರಿ ಕುಟುಂಬದವರು ಹಾಗೂ ಇತರರು ಇಲ್ಲಿ ಕುಳಿತು ಗಲಾಟೆ ಮಾಡಬೇಡಿ ಎಂದು ಆಗಾಗ ತಿಳಿಹೇಳಿದ್ದರು. ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ಶ್ರೀಶ ಬಳ್ಳಾರಿ ಅವರ ಮನೆಯ ಹಿತ್ತಲಿನ ಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ಆಗ ಶ್ರೀಶ ಕುಟುಂಬಸ್ಥರು ಇಲ್ಲಿಂದ ಹೋಗಿ ಎಂದು ಹೇಳಿದ್ದರಿಂದ ಕೋಪಗೊಂಡ ಯುವಕರಾದ ಮಲಿಕ್‌ರಿಹಾನ್ ಹಜರತ್ ಅಲಿ ಕಲಾದಗಿ, ಅಯಾನ್ ಇಕ್ಬಾಲ್ ಅತ್ತಾರ ಮತ್ತು ರಿಜ್ವಾನ್ ಮನಿಯಾರ್ ಎಂಬುವವರು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಶ್ರೀಶ ಬಳ್ಳಾರಿ ಅವರ ಮೇಲೆ ಕಲ್ಲು ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಹೋದ ಮನೆಯವರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಘದ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆ ಎದುರು ಕಾರ್ಯಕರ್ತರ ಜಮಾವಣೆ

ವಿಷಯ ತಿಳಿಯುತ್ತಿದ್ದಂತೆ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಸ್ಥಳಕ್ಕೆ ದೌಡಾಯಿಸಿದ್ದರು. ಹಲ್ಲೆ ಮಾಡಿದ ಯುವಕರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ನಂತರ ಶಹರ ಠಾಣೆಗೆ ತೆರಳಿದ ಹಿಂದು ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಅನ್ಯ ಕೋಮಿನ ಯುವಕರು ಆರ್‌ಎಸ್‌ಎಸ್ ಕುಟುಂಬವನ್ನು ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದರು.

ಗಾಂಜಾ ಸೇವಿಸಿ ಗದ್ದಲ

ಹೆಬ್ಬಳ್ಳಿ ಅಗಸಿ ಪ್ರದೇಶದ ಅನ್ಯ ಕೋಮಿನ ಕೆಲವು ಯುವಕರು ಸುಮಾರು ಮೂರು ತಿಂಗಳಿನಿಂದ ಬಳ್ಳಾರಿ ಅವರ ಮನೆ ಕಾಂಪೌಂಡ್ ಮೇಲೆ ಕುಳಿತು ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತ ಹರಟೆ ಹೊಡೆಯುತ್ತಿದ್ದರು. ಅಲ್ಲಿ ಕೂಡಬೇಡಿ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸುತ್ತಿದ್ದರು. ಬುಧವಾರ ಯುವಕರು ಮತ್ತೆ ಗಲಾಟೆ ಮಾಡಿ ಹಳೇ ದ್ವೇಷದಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net