ಈವರೆಗೆ ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ : ಕೆಪಿಸಿಸಿ ಕಾರ್ಯಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪ

Published on

ಮೈಸೂರು: ನೂರು ವರ್ಷ ಪೂರೈಸಿರುವ ಆರ್‌ಎಸ್‌ಎಸ್ ಸಂಘಟನೆ ಈವರೆಗೆ ನೋಂದಣಿಯಾಗದೇ ನಡೆಯುತ್ತಿದೆ. ಜತೆಗೆ ಈ ಸಂಘಟನೆಗೆ ದೇಣಿಗೆಯಾಗಿ ಬಂದಿರುವ ಹಣಕ್ಕೆ ಲೆಕ್ಕವನ್ನೇ ಕೊಟ್ಟಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿ.ಎಸ್.ಉಗ್ರಪ್ಪ ದೂರಿದರು.

ನೋಂದಣಿ ಇಲ್ಲದೇ ದೇಣಿಗೆ ಸಂಗ್ರಹ ರಾಷ್ಟ್ರದ್ರೋಹಿವೋ ಅಥವಾ ರಾಷ್ಟ್ರ ಭಕ್ತಿಯೋ ಎಂಬುದನ್ನು ಪ್ರಧಾನಿ ನರೇಂದ್ರಮೋದಿ ಮತ್ತು ಆರ್‌ಎಸ್‌ಎಸ್ ಸರಸಂಚಾಲಕರು ತಿಳಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನೂರು ವರ್ಷವಾದರೂ ಆರ್‌ಎಸ್‌ಎಸ್ ಏಕೆ ನೋಂದಣಿ ಮಾಡಿಕೊಂಡಿಲ್ಲ. ಪ್ರತಿ ವರ್ಷ ನಾಗಪುರದಿಂದ ಕನ್ಯಾಕುಮಾರಿ, ಕಾಶ್ಮೀರದವರೆಗೂ ನೂರಾರು ಶಾಖೆಗಳು ತಲೆ ಎತ್ತಿವೆ. ಇಲ್ಲಿ ಹಿತೈಶಿಗಳ ಮೂಲಕ ಸಾವಿರಾರು ಕೋಟಿ ರೂ. ಹಣ ಪಡೆಯುತ್ತಿದೆ. ಅದರ ಲೆಕ್ಕಚಾರ ಎಲ್ಲಿದೆ ಎಂಬುದನ್ನು ಜನರಿಗೆ ತಿಳಿಸಿ ಎಂದು ಆಗ್ರಹಿಸಿದರು.

ನ್ಯಾಷನಲ್ ಹೆರಾಲ್ಡ್ ಮೇಲೆ ಇಲ್ಲದ ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದೀರಿ. ಅದೇ ಆರ್‌ಎಸ್‌ಎಸ್ ಮೇಲೆ ಕ್ರಮ ಯಾಕಾಗಿಲ್ಲ ಎಂದು ಪ್ರಶ್ನಿಸಿದರು.

ಬಡತನ, ಜಾತಿ ವ್ಯವಸ್ಥೆ ಹೋಗಾಲಡಿಸಲು ಆರ್‌ಎಸ್‌ಎಸ್ ಕೊಡುಗೆಗಳು ಏನು ? ದೇಶವನ್ನು ಬಲಿಷ್ಠಗೊಳಿಸಲು ಇವರ ಕೊಡುಗೆ ಏನು ? ಕಳೆದ ನೂರು ವರ್ಷಗಳ ಸಂಘದ ನೈಜ ಭಾರತದ ಅಭಿವೃದ್ಧಿಗೆ ಏನು ಎಂಬ ಬಗ್ಗೆ ಪ್ರಧಾನಿ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಆರ್‌ಎಸ್‌ಎಸ್ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಬ್ರಿಟಿಷ್ ಅವರ ಜತೆಗೆ ಸೇರಿಕೊಂಡಿದ್ದರು. ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಯಾವುದರಲ್ಲಿಯೂ ಇವರ ಪಾತ್ರವಿಲ್ಲ. ಅಸಲಿಗೆ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನೇ ಆರಿಸಲಿಲ್ಲ. ಇವರು ರಾಷ್ಟ್ರಭಕ್ತರೇ ಎಂದು ಪ್ರಶ್ನಿಸಿದ ಅವರು ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಡಲಿಕ್ಕೆ ಕಾಂಗ್ರೆಸ್ ಕೊಡುಗೆ ಇದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಮೂಲಕ ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಒಬ್ಬನೇ ಒಬ್ಬ ದಲಿತನನ್ನು ಸರಸಂಚಾಲಕನನ್ನಾಗಿ ಮಾಡಲಾಗಿಲ್ಲ. ಆರ್‌ಎಸ್‌ಎಸ್ ಸಂಘಟನೆಯನ್ನು ಬ್ರಾಹ್ಮಣರ ಸ್ವಯಂ ಸೇವಕ ಸಂಘ ಅಗಿದೆ ಎಂದು ಲೇವಡಿ ಮಾಡಿದರು.

ಈಗ ನಡೆಯುತ್ತಿರುವುದು ವೈಚಾರಿಕ ಸಂಘರ್ಷವೇ ಹೊರತು ವೈಯುಕ್ತಿಕ ಸಂಘರ್ಷ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು, ಗಾಂಧಿ ಕೊಂದ ನಿಮ್ಮ ಮನಸ್ಥಿತಿ ನೂರು ವರ್ಷದ ನಂತರವು ಹೋಗಿಲ್ಲ ಎಂಬುದು ತೋರಿಸುತ್ತದೆ. ಈ ಮನಸ್ಥಿತಿ ಬಿಡಿ ಇಲ್ಲದಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದರು.

ರಾಜ್ಯದಲ್ಲಿನ ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೆ ನನ್ನ ನೇತೃತ್ವದಲ್ಲೇ 40 ಜನರ ಸಮಿತಿ ಮಾಡಲಾಯಿತು. 2018ರಲ್ಲಿ 6 ಸಾವಿರ ಪುಟಗಳನ ವರದಿ ನೀಡಲಾಯಿತು. ವರದಿ ಅನುಷ್ಠಾನವಾದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ

ಮೈಸೂರು: ಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಪಕ್ಷದ ಹೈಕಮಾಂಡ್ ಅಂತಿಮ. ಸಿಎಂ ಆಯ್ಕೆಯಂತಹ ಸಂದರ್ಭ ಬಂದರೆ ಶಾಸಕರೆಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಹೈಕಮಾಂಡ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಉಗ್ರಪ್ಪ ತಿಳಿಸಿದರು.

ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ, ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ಅನಿವಾರ್ಯತೆಯೂ ಇದೆ ಎಂದರು.

ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಸಿಎಂ ಯೋಚಿಸಬಹುದು. 10ರಿಂದ 20 ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದವರನ್ನು ಪಕ್ಷ ಸಂಘಟನೆಗೆ ಕಳುಹಿಸಿಕೊಡಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ. ಈ ಅಭಿಪ್ರಾಯದ ಹಿನ್ನೆಲೆಯಲ್ಲೇ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net