ಮೈಸೂರು: ಹಿಂದುತ್ವವನ್ನು ವಾದಿಸುತ್ತಿರುವ ಆರ್‌ಎಸ್‌ಎಸ್ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವಿರೋಧಿಯಾಗಿದೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಟೀಕಿಸಿದರು.
ಪ್ರಜಾಪ್ರಭುತ್ವ ಅಡಿಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಆರ್‌ಎಸ್‌ಎಸ್‌ನ 100ನೇ ವರ್ಷದ ಆಚರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಹಿಂದುತ್ವವೇ ಆರ್‌ಎಸ್‌ಎಸ್ ಮೂಲ ಅಜೆಂಡಾವಾಗಿದೆ. ವೀರ ಸಾವರ್ಕರ್, ಹೆಗ್ಗಡೆವಾರ್ ಅವರನ್ನು ಹಿಂದುತ್ವದ ನಾಯಕರೆಂದು ಬಿಂಬಿಸುತ್ತಿರುವ ಆರ್‌ಎಸ್‌ಎಸ್ ಇಡೀ ದೇಶವನ್ನು ಹಿಂದು ರಾಷ್ಟ್ರವಾಗಿಸುವ ಗುರಿ ಹೊಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಲ್ಲಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟು, ಕೇಂದ್ರದ ಸಚಿವರನ್ನು ಸಮಿತಿಗೆ ಸೇರ್ಪಡೆಗೊಳಿಸುವ ಮೂಲಕ ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜಾತಿ ಗಣತಿಯು ಪ್ರಮುಖವಾಗಿದ್ದು, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇದು ಕೇವಲ ಜಾತಿ ಸಮೀಕ್ಷೆಯಲ್ಲ. ಸಮೀಕ್ಷೆಯಲ್ಲಿ ಜಾತಿಯ ಮಾಹಿತಿಯೊಂದಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕೂಡ ಆಗಿದೆ. ಜನತೆ ಗಣತಿದಾರರರಿಗೆ ಮಾಹಿತಿ ನೀಡುವ ಮೂಲಕ ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ನಗರ ವಕ್ತಾರ ಮಹೇಶ್ ಇದ್ದರು.