

ವಿಜಯಪುರ: ಹಿಂದು ಎನ್ನುವುದ ಕೇವಲ ಧರ್ಮವಲ್ಲ; ಸ್ವಾಭಿಮಾನದ ಪ್ರತೀಕ. ರಾಷ್ಟ್ರೀಯತೆಯ ಸಂಕೇತ. ಹಿಂದು ರಾಷ್ಟ್ರ ನಿರ್ಮಾಣವೇ ಆರ್‌ಎಸ್‌ಎಸ್‌ನ ಸಂಕಲ್ಪ ಎಂದು ವಿಶ್ವ ಹಿಂದು ಪರಿಷತ್‌ನ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ ಜೀ ಹೇಳಿದರು.
ಇಲ್ಲಿನ ದರಬಾರ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನ್ಮ ಶತಾಬ್ದಿ ಹಾಗೂ ವಿಜಯದಶಮಿ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಪಥಸಂಚಲನ ಬಳಿಕ ಬಹಿರಂಗ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಅಖಂಡ ಹಿಂದು ರಾಷ್ಟ್ರ ನಿರ್ಮಾಣದ ಕನಸು ಮತ್ತು ಸಂಕಲ್ಪದೊಂಗೆ 1925 ರಲ್ಲಿ ಸ್ಥಾಪನೆಗೊಂಡ ಆರ್‌ಎಸ್‌ಎಸ್ ಇಂದು ಜಗತ್ತಿನಾದ್ಯಂತ ಪಸರಿಸಿದೆ. ಸಂಘ ನಿರ್ಮಾಣಗೊಂಡಾಗ ಡಾ.ಕೇಶವ ಬಲಿರಾಮ್ ಹೆಡಗೇವಾರ ಅವರು ಶತಾಬ್ಧಿಯ ಕನಸು ಕಂಡಿರಲಿಲ್ಲ. ಸಂಘದ ಹೆಸರು ಎಲ್ಲೆಡೆ ವ್ಯಾಪಿಸಬೇಕೆಂಬ ಕನಸು ಅವರದ್ದಾಗಿರಲಿಲ್ಲ. ಪ್ರಾಚೀನ ರಾಷ್ಟ್ರವಾಗಿರುವ ಭಾರತ ಹಿಂದು ರಾಷ್ಟ್ರವಾಗಬೇಕೆಂಬ ಕನಸು ಕಂಡಿದ್ದರು. ಕೇವಲ ಬ್ರಿಟಿಷರನ್ನು ಓಡಿಸಿದರೆ ಸಾಲದು ಅವರು ಭಾರತದಲ್ಲಿ ಬೇರೂರಲು ಕಾರಣವಾದ ಅಂಶ ಅರಿತು ಮತ್ತೆಂದೂ ಅದು ಮರುಕಳಿಸದಂತೆ ನೋಡಿಕೊಳ್ಳಬೇಕೆಂಬ ಕಲ್ಪನೆಯಿಂದ ಅವರು ಸಂಘ ಸ್ಥಾಪಿಸಿದರು. ಕೇವಲ ನಾಲ್ಕು ಜನ ಹುಡುಗರನ್ನು ಕಟ್ಟಿಕೊಂಡು ಕಬ್ಬಡ್ಡಿಯಾಡಿದರೆ ಹಿಂದು ರಾಷ್ಟ್ರ ನಿರ್ಮಾಣವಾಗುವುದೇ ? ಇವನೊಬ್ಬರ ಮೂರ್ಖರ ಸಂಘದ ನಾಯಕ ಎಂದು ಅಪಹಾಸ್ಯ ಮಾಡಿದವರು ಅನೇಕರು. ಆದರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಸಂಘ ಹುಟ್ಟು ಹಾಕಿದವರು ಹೆಡಗೇವಾರ ಎಂದು ಗೋಪಾಲ ಜೀ ಹೇಳಿದರು.
ಸಂಘ ಸ್ಥಾಪನೆಗೂ ಮೊದಲು ಡಾ.ಹೆಡಗೇವಾರ ಅವರು ಸ್ವಾತಂತ್ರೃಕ್ಕಾಗಿ ಹೋರಾಡಿದರು. ಅತೀ ಸಣ್ಣ ವಯಸ್ಸಿನಲ್ಲಿಯೇ ವಿಕ್ಟೋರಿಯಾದ ರಾಣಿಯ ಜನ್ಮ ದಿನದ ಹಿನ್ನೆಲೆ ನೀಡಿದ ಸಿಹಿ ತಿನಿಸು ಕಸದ ಬುಟ್ಟಿಗೆ ಎಸೆದು ಆಕ್ರೋಶ ಹೊರಹಾಕಿದರು. ದೇಶಾಭಿಮಾನ ಮೆರೆದರು ರಾಷ್ಟ್ರ ಭಕ್ತಿಯ ಅಮೃತ ಕುಡಿದು ಬೆಳದ ಅವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಶಸ್ತ್ರ ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದರು. ವೈದ್ಯಕೀಯ ಪದವಿ ಬಳಿಕ ಬರ್ಮಾದಲ್ಲಿ ಉತ್ತಮ ಹುದ್ದೆ ಸಿಕ್ಕರೂ ಅದನ್ನು ತ್ಯಜಿಸಿದರು. ಬಡತನದಲ್ಲಿ ಜನಿಸಿದರೂ ದೇಶಭಕ್ತಿಯಲ್ಲಿ ಯಾವ ಬಡತನವೂ ಕಾಣದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಜೈಲಿಗೆ ಹೋದರು. ಈ ದೇಶ ಕೇವಲ ಬ್ರಿಟಿಷ್‌ರಿಂದ ಮುಕ್ತ ಮಾಡಿದರೆ ಸಾಲದು. ಪ್ರತಿಯೊಬ್ಬ ದೇಶಕ್ಕಾಗಿ ಹೋರಾಡಬೇಕೆಂಬ ಭಾವ ಬೆಳೆಸಿಕೊಳ್ಳಬೇಕೆಂದು ಸಾರಿದರು.
ನಾಗಪುರದಲ್ಲಿ ಕೇವಲ 13 ರಿಂದ 15 ವರ್ಷದ ಮಕ್ಕಳನ್ನು ಕಟ್ಟಿಕೊಂಡು 1925ರಲ್ಲಿ ಸಂಘ ಸ್ಥಾಪಿಸಿದ ಹೆಡಗೇವಾರ ಅವರು ಪ್ರತಿನಿತ್ಯ ವ್ಯಾಯಾಮ, ಆಟ, ಮಹಾಪುರುಷರ ಜೀವನ ಪಾಠ ಕಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾದರು. ರಾಷ್ಟ್ರಕ್ಕಾಗಿ ಬದುಕಬೇಕೆಂಬ ಬೀಜ ಬಿತ್ತಿದರು. ಕೇವಲ 15 ವರ್ಷಗಳಲ್ಲಿ ಹೆಡಗೇವಾರ ಥರ ಬದುಕೇಂಬ ಆಸೆಯಿಂದ ಅನೇಕರು ಬಂದರು. ಅವರು ಸಂಘ ಸ್ಥಾಪಿಸಿದಾಗ ಚಿಕ್ಕ ಮಕ್ಕಳಾಗಿದ್ದ ಸಂಘದ ಹಿರಿಯರೊಬ್ಬರು ಹೇಳಿದ ಪ್ರಕಾರ-ಹೆಡಗೇವಾರ ತೀರಿದಾಗ ಅವರಿಗೆ 51 ವರ್ಷ ವಯಸ್ಸು. ಆಗ ಅವರು ಬೆಳೆಸಿದ ಮಕ್ಕಳು ಚಿಕ್ಕವರಾಗಿದ್ದರು. ಮಹಡಿ ಮೇಲೆ ಫೋಟೊ ಪೂಜಿಸಿ ಹೂ ಇಟ್ಟು ಅಳುತ್ತಿದ್ದರು. ಒಬ್ಬ ತಾಯಿ ಅದನ್ನು ಗಮನಿಸಿದಾಗ ಎದ್ದು ನಿಂತು ನಾವು ಅಳೋದರಿಂದ ಹೆಡಗೇವಾರ ಬರಲ್ಲ ಬದಲಾಗಿ ಅವರು ಯಾವುದಕ್ಕಾಗಿ ಬದುಕಿದ್ದರು ಅದಕ್ಕಾಗಿ ನಾವು ಬದುಕಬೇಕು. ಅಂದಾಗ ಸಾರ್ಥಕತೆ ಬರಲಿದೆ ಎಂಬ ತೀರ್ಮಾನ ತೆಗೆದುಕೊಂಡ ಫಲ ಸಂಘ ಬೆಳೆಯುತ್ತಾ ಹೋಯಿತು ಎಂದು ಗೋಪಾಲ ಜೀ ಸಂಘ ಬೆಳೆದು ಬಂದ ಬಗೆ ವಿವರಿಸಿದರು.
ಸಂಘದ ಬೆಳವಣಿಗೆಯಲ್ಲಿ ಅನೇಕರ ತ್ಯಾಗ, ಬಲಿದಾನ ಮತ್ತು ಪರಿಶ್ರಮವಿದೆ. ದೇಶದ ಮೂಲೆ ಮೂಲೆಗೂ ಸಂಘದ ಶಾಖೆ ವಿಸ್ತರಿಸಿದೆ. ತಮಿಳುನಾಡಿನಲ್ಲಿ ರಾಮನ ಪ್ರತಿಮೆಗೆ ಚಪ್ಪಲಿ ಹಾರ ಹಾಕುತ್ತಿದ್ದರು. ಈಗ ತಮಿಳುನಾಡು ಸೇರಿ ಜಮ್ಮು- ಕಾಶ್ಮೀರ, ಗುಜರಾತ, ಉತ್ತರ ಪ್ರದೇಶ, ಕರ್ನಾಟಕ ಸೇರಿ ಎಲ್ಲ ಕಡೆ ವಾತಾವರಣ ಬದಲಾಗಿದೆ. ನೂರು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಭಾವ ಬದಲಾಗಿದೆ. ಪರಿವರ್ತನೆಯಾಗಿದೆ. ಪ್ರವಾಹದ ದಿಕ್ಕು ಬದಲಾಗಿದೆ. ರಾಷ್ಟ್ರ ದ ಹಿತಕ್ಕಾಗಿ ಚಿಂತನೆ ಆರಂಭವಾಗಿದೆ. ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಬದಲಾಗಿದೆ. ಉತ್ತರ ಪ್ರದೇಶದ ಮೂಲೆ ಮೂಲೆಯಲ್ಲಿ ಶಾಖೆಗಳು ನಡೆಯುತ್ತಿವೆ. ಇಡೀ ದೇಶ ಒಂದು ಎಂಬ ಭಾವ ಬೆಳೆದಿದೆ. ಕಾಶ್ಮೀರದಲ್ಲಿ ಹಿಂದು ಹೊಟೇಲ್‌ಗಳು ಆರಂಭಗೊಂಡಿವೆ. ವೇದ ಮಂತ್ರಗಳ ಪಠಣ ಆರಂಭಗೊಂಡಿದೆ ಎಂದರು.
ಸಂಘಟನೆ ಮಟ್ಟ ಹಾಕಲು 1948 ರಲ್ಲಿ ಗಾಂಧಿ ಹತ್ಯೆ ವಿಷಯ ತೆಗೆದುಕೊಂಡು ನಿಷೇಧ ಹೇರಲಾಯಿತು. ಗಾಂಧಿ ನೇತೃತ್ವದಲ್ಲಿ ಲಕ್ಷ ಲಕ್ಷ ಜನ ಹಿಡಿ ಉಪ್ಪು ಹಿಡಿದು, ಖಾದಿ ಹಿಡಿದು ಹೋರಾಟ ಮಾಡಿದಾಗ ಅವರ ಬಗ್ಗೆ ದೇಶದ ಜನರಲ್ಲಿ ಶ್ರದ್ಧೆಯ ಭಾವ ಇತ್ತು. ಆ ಭಾವವನ್ನೇ ಕೆರಳಿಸಿ, ಸಂಘದ ವಿರೋಧಿ ಭಾವ ಬಿತ್ತಿದರು. ಜಮಖಂಡಿಯ ತೇರದಾಳದಲ್ಲಿ ಒಂಬತ್ತು ಜನರನ್ನು ಜೀವಂತವಾಗಿ ಸುಡಲಾಯಿತು. ಯಾವ ಸಮಾಜವನ್ನು ನಾವು ದೇವತೆ ಎಂದು ಪೂಜಿಸುತ್ತೇವೋ ಆ ಸಮಾಜ ತಿರುಗಿ ಬಿದ್ದಿತ್ತು. ಮಕ್ಕಳು ಶಾಖೆಗೆ ಹೋದರೆ ಗಾಂಧಿ ಕೊಂದವರ ಶಾಖೆ ಎಂದು ಟೀಕಿಸಿದರು. ವಿರೋಧ ಲೆಕ್ಕಿಸದೇ ಅನೇಕರು ಸಮಾಜ ಸೇವೆ ಎಂದು ಸಂಘದ ಕೆಲಸ ಮಾಡಿದರು. ಮನೆ-ಮನಗಳನ್ನು ಜೋಡಿಸಿದರು. ಜಾತಿ, ಮತ, ಪಂಗಡ ಎಂದು ಬೇಧ ಮಾಡದೇ ಎಲ್ಲರೂ ಛಲ ಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸಿದ ಫಲ ಸಂಘ ಬೆಳೆಯಿತು. ದ್ವೇಷ ಮಾಡದೇ ಎಲ್ಲರೂ ನಮ್ಮವರೆಂದು ಭಾವಿಸಿದ ಪರಿಣಾಮ ಸಮಾಜ ಸ್ವೀಕಾರ ಮಾಡುತ್ತಿದೆ ಎಂದರು.
ಆರ್‌ಎಸ್‌ಎಸ್‌ನ ಪರಿಶ್ರಮದ ಫಲವಾಗಿ ಭಾರತದ ಚಿತ್ರಣ ಬದಲಾಗಿದೆ. ವಿದ್ಯಾರ್ಥಿ ಪರಿಷತ್, ವಕೀಲರ ಪರಿಷತ್, ಶಿಕ್ಷಕರ ಪರಿಷತ್, ಭಾರತೀಯ ಕಿಸಾನ್ ಸಂಘ ಸೇರಿ 35 ಕ್ಕೂ ಅಧಿಕ ಸಂಘಟನೆಗಳು, 100 ಕ್ಕೂ ಅಧಿಕ ಶಾಖೆಗಳು ಹಿಂದು ಸಮಾಜದ ಏಕತೆ, ರಾಷ್ಟ್ರದ ಹಿತಕ್ಕಾಗಿ ಶ್ರಮಿಸುತ್ತಿವೆ. ಗೋ ರಕ್ಷಣೆ, ರಾಮ ಮಂದಿರ ನಿರ್ಮಾಣ ಹೀಗೆ ಅನೇಕ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಘದ ಕಾರ್ಯ ಸಫಲವಾಗುತ್ತಿದೆ. ಜಗತ್ತಿಗೆ ಕರೊನಾ ಬಂದಾಗ ಪುಕ್ಸಟ್ಟೆಯಾಗಿ ಔಷಧ ಕೊಟ್ಟ ದೇಶ ಭಾರತ. ನಾವು ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿದವರಲ್ಲ. ಇಂದು ಆ ಆಕ್ರಮಣ ಮಾಡಿದರೆ ಬಿಡುವವರಲ್ಲ. ನಾವು ಅರ್ಜುನನ ವಂಶಸ್ಥರು. ಪಲಾಯನ ನಮ್ಮ ಸಂಸ್ಕೃತಿ ಅಲ್ಲ. ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ, ರಾಣಾ ಪ್ರತಾಪ್ ಸಿಂಹ ಅವರ ಪರಾಕ್ರಮವುಳ್ಳವರು ಎಂದು ಗೋಪಾಲ್ ಜೀ ಅಭಿಮಾನ ಪೂರ್ವಕವಾಗಿ ನುಡಿದರು.
ಮುಖ್ಯ ಅತಿಥಿ ಮೇದಾರ ಕೇತಯ್ಯ ಸಮಾಜದ ಅಧ್ಯಕ್ಷ ವಿಠಲ ಪರಾಂಡೆ ಮಾತನಾಡುತ್ತಾ, ಎಲ್ಲವರೂ ಒಳ್ಳೆಯವರಲ್ಲ; ಎಲ್ಲರೂ ಕೆಟ್ಟವರಲ್ಲ. ಕೆಟ್ಟವರನ್ನು ಒಳ್ಳೆಯವರನ್ನಾಗಿಸುವ ಕಾರ್ಯದಿಂದ ಸಮಾಜ ಸುಂದರವಾಗಲಿದೆ. ಎಲ್ಲರೂ ಒಂದಾಗಿ ಸುಂದರ ಸಮಾಜ ನಿರ್ಮಾಣ ಮಾಡಬೇಕು. ಸಮಾಜ ಬೆಳೆಸಬೇಕು. ನಾವೆಲ್ಲ ಒಂದೇ ಎಂದು ತಿಳಿಯಬೇಕು. ಅದಕ್ಕಾಗಿ ಮನೆಯಲ್ಲಿ ಕುಳಿತರೆ ಆಗಲ್ಲ, ಹೋರಾಡಬೇಕು ಎಂದರು.
ಜಿಲ್ಲಾ ಸಂಘ ಚಾಲಕ ರಾಮಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿದ್ದರು.