ರಾಷ್ಟ್ರೀಯತೆ, ಭವ್ಯ ಭಾರತವೇ ಆರ್​ಎಸ್​ಎಸ್ ಉಸಿರು

hnl rss 1 oct 18
Published on

ಹೊನ್ನಾಳಿ: ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭವ್ಯ ಭಾರತ ಕಟ್ಟಲು ಹಾಗೂ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಮಹತ್ವದ ಕೊಡುಗೆ ನೀಡುತ್ತ ಬಂದಿದೆ ಎಂದು ಆರ್​ಎಸ್​ಎಸ್ ಶಿವಮೊಗ್ಗ ವಿಭಾಗದ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.

ಆರ್​ಎಸ್​ಎಸ್ 100 ವರ್ಷ ಪೂರೈಸಿದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಪಥ ಸಂಚಲನದ ಬಳಿಕ ಮಾತನಾಡಿ, ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರ ಮೊದಲು ಎಂಬುದು ಸಂಘದ ಧ್ಯೇಯ.

ಆರ್​ಎಸ್ ಎಸ್ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ 3 ಬಾರಿ ಪ್ರತಿಬಂಧನ ಕಂಡಿತು. ಈ ರೀತಿಯಾದಾಗಲೆಲ್ಲಾ ಸಂಘ ಹೆಚ್ಚು ಬೆಳೆದಿದೆ. ಇಷ್ಟೊಂದು ಹೆಮ್ಮರವಾಗಿ ಬೆಳೆಯಲು ದೇಶ ಭಕ್ತರ ಸೇವೆ ಕಾರಣ ಎಂದು ಅಭಿಪ್ರಾಯಪಟ್ಟರು.

ಸಂಘದ ಸಂಸ್ಥಾಪಕ ಹೆಡೆಗೆವಾರ್ ಅವರನ್ನು ಆರಂಭದಲ್ಲಿ ಹಲವರು ಹುಚ್ಚ ಎನ್ನುತ್ತಿದ್ದರು. ಅದಕ್ಕೆ ಅವರು ನನಗೆ ರಾಷ್ಟ್ರಭಕ್ತಿ ಮತ್ತು ಏಕತೆಯ ಹುಚ್ಚಿದೆ ಎಂದು ಹೇಳಿದ್ದರು. ಇದು ದೇಶ ಕಟ್ಟುವ ಕಟ್ಟಾಳಿನ ಮಾತಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಸಂಘವನ್ನು ಟೀಕಿಸಿದವರೆಗೆ ತಕ್ಕ ಉತ್ತರ ಸಿಕ್ಕಿದೆ ಎಂದರು.

ವಿಶ್ವದ ಹಲವು ದೇಶಗಳು ದಿವಾಳಿ ಕಂಡಿದ್ದರೂ ಭಾರತ ಮಾತ್ರ ಪುಟಿದೇಳುತ್ತಿರಲು ದೇಶದ ಕುಟುಂಬ ವ್ಯವಸ್ಥೆ ಗಟ್ಟಿಯಾಗಿರುವುದೇ ಕಾರಣ. ಆರ್​ಎಸ್​ಎಸ್,ವಿಎಚ್​ಪಿ, ಭಜರಂಗದಳ, ಎಬಿವಿಪಿ, ಬಿಜೆಪಿ ಹೀಗೆ ಅನೇಕ ಶಾಖೆಗಳು ದೇಶಕ್ಕಾಗಿ ದುಡಿಯುತ್ತಿವೆ ಎಂದು ತಿಳಿಸಿದರು.

ಸಂಘವು ನಿರಂತರವಾಗಿ ದೇಶಕಟ್ಟುವ ಕೆಲಸ ಮಾಡುತ್ತಿದೆ. ಇದಕ್ಕೆ ಭಾರತೀಯರು ಜತೆಗೂಡಿದ್ದಾರೆ. ಇದನ್ನು ಸಹಿಸದ ಕೆಲವರು ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ತಾಲೂಕು ಸಂಚಾಲಕ ವೈದ್ಯ ಜೀತೇಂದ್ರ ಇದ್ದರು.

ಇದಕ್ಕೂ ಮುನ್ನ ಹೊನ್ನಾಳಿಯಲ್ಲಿ ಪಥಸಂಚಲನ ನಡೆಯಿತು. ಮಾರ್ಗದುದ್ದಕೂ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ಭಾರತ ಮಾತೆಗೆ, ಆರ್​ಎಸ್​ಎಸ್​ಗೆ ಜೈಕಾರ ಕೂಗಿದರು. ಅಲ್ಲಲ್ಲಿ ಕೇಸರಿ ಅಲಂಕಾರ, ಮನೆಗಳ ಮುಂದೆ ಸ್ವಯಂ ಸೇವಕರಿಗೆ ಸ್ವಾಗತ ಕೋರುವ ರಂಗೋಲಿಗಳನ್ನು ಮಾತೆಯರು ಬಿಡಿಸಿದ್ದರು.

ದುರ್ಗಿಗುಡಿ, ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಸ್ವಯಂಸೇವಕರನ್ನು ಸ್ವಾಗತಿಸಲಾಯಿತು.

ಬಾಲ ಸ್ವಯಂಸೇವಕರು: 9 ತಿಂಗಳ ಮಗು ಶ್ರೀ ಕೃಷ್ಣ, ಒಂದುವರೆ ವರ್ಷದ ವೀರಾನ್ಶ್, ಸ್ಥವ್ಯ ಸೇರಿ 5 ವರ್ಷದ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ತಾಯಂದಿರು ಗಣವೇಶ ಹಾಕಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು.

ಜಿಲ್ಲಾ ಕಾರ್ಯವಾಹ ಮಾರುತಿ, ತಾಲೂಕು ಕಾರ್ಯವಾಹ ಗುರುಶಂಕರ, ಸಹ ಕಾರ್ಯವಾಹ ಸಂತೋಷ್, ಸಂಘದ ಪ್ರಮುಖರಾದ ಅರುಣಕುಮಾರ್, ಭರತ್, ಹರ್ಷ, ವಿಠಲ್, ಉಮಾನಾಥ್, ಶ್ರೀನಿವಾಸ್​ವುೂರ್ತಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಎ.ಬಿ. ಹನುಮಂತಪ್ಪ, ಶಾಂತರಾಜ್ ಪಾಟೀಲ್, ಜೆ.ಕೆ. ಸುರೇಶ್, ಎಂ.ಆರ್. ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net