

ಆಲಮೇಲ: ಪಟ್ಟಣದ ಕೆರೆಯ ಜಾಗದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಸ್ಯೋದ್ಯಾನ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಇಂಡಿ ರಸ್ತೆಯಲ್ಲಿನ ಯಳಮೇಲಿ ವಿಶಾಲ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಐತಿಹಾಸಿ ಯಳಮೇಲಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ 3.5 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 64 ಎಕರೆಯಲ್ಲಿ ಹರಡಿಕೊಂಡಿರುವ ಕೆರೆಗೆ ಸುತ್ತಲೂ ತಡೆಗೋಡೆ ನಿರ್ಮಿಸಿ ವಾಕಿಂಗ್ ವೇ ಮಾಡುವ ಕೆಲಸ ಭರದಿಂದ ನಡೆದಿದೆ. ಜತೆಗೆ ಪ್ರತಿ ಕ್ಷೇತ್ರಕ್ಕೆ 1ಕೋಟಿ ರಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸಸ್ಯೋದ್ಯಾನ ನಿರ್ಮಿಸಲು ಮಂಜೂರಾತಿ ಸಿಕ್ಕಿದ್ದು, ಕ್ಷೇತ್ರದಲ್ಲಿ ಎರಡು ಸಸ್ಯೋದ್ಯಾನ ನಿರ್ಮಿಸಲಾಗುತ್ತದೆ. ಇಲ್ಲಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ಸಹಿತ ಮೈದಾನ ಮೈದಾಳಲಿದೆ. ಯಳಮೇಲಿ ಐತಿಹಾಸಿಕ ಕೆರೆಗೆ ಮತ್ತೇ ಸಂಭ್ರಮ ಕಲ್ಪಿಸುವುದು ನಮ್ಮ ತಂದೆಯವರ ಕನಸಾಗಿತು. ಅವರ ಆಶಯದಂತೆ ಈ ಕೆರೆಯ ಸಮಗ್ರ ಅಭಿವೃದ್ಧಿ ಮತ್ತು ಉದ್ಯಾನವನ ಶೀಘ್ರ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ತಾಲೂಕು ಅಧಿಕಾರಿ ರಾಜೀವ ಬಿರಾದಾರ, ಇರ್ಷಾದ ನೇವರ, ಸಣ್ಣ ನೀರಾವರಿ ಇಲಾಖೆ ಎಇಇ ಸೇವಾಲಾಲ ಚವಾಣ್, ಸೋಮನಗೌಡ ಬಿರಾದಾರ, ಪಪಂ ಅಧ್ಯಕ್ಷ ಸಾಧಿಕ್ ಸುಂಬಡ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಶೋಕ ಕೊಳಾರಿ, ಮುಖಂಡ ರಮೇಶ ಭಂಟನೂರ, ವೀರಭದ್ರ ಕತ್ತಿ, ಭೀಮ್ಮು ಬಮ್ಮನಹಳ್ಳಿ, ವಹಾಬ್ ಸುಂಬಡ, ಮಲ್ಲು ಅಚ್ಚಲೇರಿ, ಪ್ರಕಾಶ ಉಪ್ಪಿನ, ಯೂನುಸ್ ದೇವರಮನಿ ಇತರರಿದ್ದರು.