

ಕುಣಿಗಲ್: ಹುತ್ರಿದುರ್ಗ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹೆಚ್ಚುವರಿಯಾಗಿ 9 ಕೋಟಿ ರೂ., ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಹುತ್ರಿದುರ್ಗ ಹಾಗೂ ಹೊಡಾಘಟ್ಟ ಆದಿನಾರಾಯಣಸ್ವಾಮಿ ಮರು ಪ್ರತಿಷ್ಠಾಪನೆ ಮತ್ತು ಶ್ರೀರಾಮ, ಬಸವೇಶ್ವರಸ್ವಾಮಿ, ಮಾರಮ್ಮದೇವಿ ದೇವಾಲಯ ಜೀರ್ಣೋದ್ಧಾರ, ಕುಂಭಾಭಿಷೇಕ, ಗೋಪುರ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಪ್ರವಾಸೋದ್ಯಮ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ 12 ಕೋಟಿ ರೂ. ಮಂಜೂರಾಗಿದ್ದು ಬಿಸಿಲು ಬಸವಣ್ಣ ಮಂಟಪ, ಪ್ರವಾಸಿ ಮಂದಿರ ಕಟ್ಟಡ, ಬೆಟ್ಟಕ್ಕೆ ಹೋಗುವ ಮೆಟ್ಟಿಲು ನಿರ್ಮಾಣ, ರಸ್ತೆ ಡಾಂಬರೀಕರಣ, ಸಿಸಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಉದ್ಯಾನವನ, ರೈಲಿಂಗ್ ಕಾಮಗಾರಿ ಸೇರಿ ವಿವಿಧ ಅಭಿವೃದ್ಧಿಗೆ ಮತ್ತೆ ಹೆಚ್ಚುವರಿಯಾಗಿ 9 ಕೋಟಿ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
16 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ 12 ಸಾವಿರ ನಿವೇಶನ ಬಡವರಿಗೆ ನೀಡಿದ್ದೆ. ಈಗಲೂ ತಾಲೂಕಿನ ಜನರ ನಡುವೆ ನನ್ನ ಒಡನಾಟ ಇಟ್ಟುಕೊಂಡಿದ್ದೇನೆ ಎಂದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾನವನಿಗೆ ದೇವರು ಎಲ್ಲ ಕೊಟ್ಟಿದ್ದಾನೆ, ಆದರೆ ಶಾಂತಿ, ನೆಮ್ಮದಿ ಕೊಟ್ಟಿಲ್ಲ. ಜನರು ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು, ದೇವರಲ್ಲಿ ಭಕ್ತಿ ಭಾವನೆ ಹೊಂದಬೇಕು ಎಂದರು.
ಕಾಡಪ್ಪನಮಠದ ಬಾಳಸಿದ್ದೇಶ್ವರ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಾಹಿತಿ ನಾರಾಯಣಘಟ್ಟ್ಟ, ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಹುತ್ರಿದುರ್ಗ ಮುಖಂಡ ಕೆಂಪೇರೇಗೌಡ, ಸಿಂಗಯ್ಯ, ಹುತ್ರಿದುರ್ಗ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆಂಪೇಗೌಡ, ರಂಗಸ್ವಾಮಿ ಇದ್ದರು.
ಹುಟ್ಟೂರು ಹೋಬಳಿ ಋಣ ತೀರಿಸುವೆ:ಹುತ್ರಿದುರ್ಗ ಹೋಬಳಿಯ 19 ಕೆರೆಗಳನ್ನು ಶ್ರೀರಂಗ ಏತ ನೀರಾವರಿ ಮೂಲಕ ತುಂಬಿಸಿ ನನ್ನ ಹುಟ್ಟೂರಿನ ಹೋಬಳಿಯ ಋಣ ತೀರಿಸುತ್ತೇನೆ. 2.50 ಕೋಟಿ ರೂ., ವೆಚ್ಚದಲ್ಲಿ ಅಂಚೇಪಾಳ್ಯದಿಂದ ಹೋಡಾಘಟ್ಟ ಹಾಗೂ ಹೋಡಾಘಟ್ಟದಿಂದ ಯಲಗಲವಾಡಿ ರಸ್ತೆಯ ಅಭಿವೃದ್ಧಿಯನ್ನು ಶೀಘ್ರ ಕೈಗೊಳ್ಳುವುದಾಗಿ ಶಾಸಕ ಡಾ.ಎಚ್.ಡಿ.ರಂಗನಾಥ್ ಭರವಸೆಯಿತ್ತರು.
ಹುತ್ರಿದುರ್ಗದ ಯುವಕರು ಪುರಾತನ ಶ್ರೀ ಆದಿನಾರಾಯಣ ದೇವಾಲಯ ಜೀರ್ಣೋದ್ಧಾರ ಮಾಡುವುದರ ಮೂಲಕ ಗ್ರಾಮಕ್ಕೆ ಗೌರವ ತರುವುದರ ಜತೆಗೆ ಎ್ಲರಿಗೂ ಮಾದರಿಯಾಗಿದ್ದಾರೆ. ಸಿದ್ದರಾಮಚೈತನ್ಯ ಸ್ವಾಮೀಜಿ, ಅರೇಶಂಕರ ಮಠ, ಕುಣಿಗಲ್