

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ 9.88 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಮೇ 22ರಂದು ಇಶಿಕಾ ಜೋಶಿ ಎನ್ನುವ ಹೆಸರಿನಲ್ಲಿ ವಾಟ್ಸಾಪ್ನಲ್ಲಿ ಲಿಂಕ್ ಬಂದಿದ್ದು, ಲಿಂಕ್ ಕ್ಲಿಕ್ ಮಾಡಿ ಸಿನಿಮಾಗಳಿಗೆ 5 ಸ್ಟಾರ್ ರೇಟಿಂಗ್ ನೀಡಿದಾಗ 150 ರೂ. ಖಾತೆಗೆ ಜಮಾ ಆಗಿದೆ. ಅನಂತರ ಟೆಲಿಗ್ರಾಂನಲ್ಲಿ ನವೀನ್ ಅರೋರ ಎನ್ನುವ ಅಪರಿಚಿತ ವ್ಯಕ್ತಿ ತಾನು ಡೇಟಾ ಟ್ಯೂಟರ್ ಎಂದು ಸಂದೇಶ ಕಳುಹಿಸಿ, 5 ಸಾವಿರ ರೂ. ಟಾಸ್ಕ್ ಫೀ ನೀಡಿದರೆ ಟೆಲಿಗ್ರಾಂ ಗ್ರೂಪ್ನಲ್ಲಿ ಸೇರಿಸಿಕೊಳ್ಳುತ್ತೇನೆ ಎಂದು ತಿಳಿಸಿದಂತೆ ದೂರುದಾರರು ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಟೆಲಿಗ್ರಾಂ ಗ್ರೂಪ್ಗೆ ಸೇರ್ಪಡೆಗೊಂಡಿದ್ದು, ಗ್ರೂಪ್ನಲ್ಲಿ ಯುಎಸ್ ಕಾಪರ್ ಾರಿನ್ ಷೇರ್ ಮಾರ್ಕೆಟ್ನಲ್ಲಿ 53,000 ರೂ. ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. ಅದರಂತೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಲಾಭದ ಬಗ್ಗೆ ವಿಚಾರಿಸಿದಾಗ ನೀವು ಯುಎಸ್ ಕಾಪರ್ ಬದಲು ಯುಕೆ ಕಾಪರ್ ಕ್ಲಿಕ್ ಮಾಡಿದ್ದೀರಿ. ರಿಪೇರ್ ಟಾಸ್ಕ್ ಪೂರ್ಣಗೊಳಿಸಿದರೆ ಮಾತ್ರ ಹಣ ಸಿಗುವುದಾಗಿ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಇದಕ್ಕೆ ಸಂಬಂಧಿಸಿ ಹಂತ ಹಂತವಾಗಿ ಒಟ್ಟು 9.88 ಲಕ್ಷ ರೂ. ಆನ್ ಲೈನ್ ಮೂಲಕ ಪಾವತಿ ಮಾಡಿದ್ದು, ಅನಂತರವೂ ಹಣ ಸಿಗದೇ ಇದ್ದಾಗ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.