

ಕುಮಟಾ: ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಭೂಕುಸಿತ ಸಮಸ್ಯೆ ಎದುರಿಸುತ್ತಿರುವ 6 ಜಿಲ್ಲೆಗಳಿಗೆ 500 ಕೋಟಿ ರೂ. ಹಾಗೂ ಕರಾವಳಿಯ 3 ಜಿಲ್ಲೆಗಳಿಗೆ ಕಡಲಕೊರೆತ ತಡೆ ಕಾಮಗಾರಿಗಾಗಿ 300 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪಟ್ಟಣದ ಆಡಳಿತ ಸೌಧಕ್ಕೆ ಮಂಗಳವಾರ ಭೇಟಿ ನೀಡಿ ಭೂಸುರಕ್ಷಾ ಯೋಜನೆಯಡಿ ಹಳೆ ದಾಖಲಾತಿಗಳ ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹೆದ್ದಾರಿ ಅಂಚಿನಲ್ಲಿ ಗುಡ್ಡ ಕಡಿದಾಗಿ ಕತ್ತರಿಸಿದ್ದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು.
ರಾಜ್ಯದಲ್ಲಿ 1500 ಮಳೆ ಮಾಪನ ಕೇಂದ್ರಗಳು ನಿಷ್ಕ್ರೀಯವಾಗಿದ್ದು, ದುರಸ್ತಿ ಮಾಡಬೇಕಾಗಿದೆ. ತೀರಾ ಹಾಳಾಗಿದ್ದನ್ನು ಬದಲಾಯಿಸಲು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದರು.
ನಾಡಕಚೇರಿಯಲ್ಲಿಯೇ ಆನ್‌ಲೈನ್ ಅರ್ಜಿ ಸಲ್ಲಿಸಿ ಅಲ್ಲಿಯೇ ದಾಖಲೆಗಳನ್ನು ಸಾರ್ವಜನಿಕರು ಪಡೆಯುವಂತಾಗಬೇಕು. ಮಧ್ಯವರ್ತಿಗಳ ಅವಲಂಬನೆ ಇಲ್ಲದೆ, ಕಚೇರಿಗಳಿಗೆ ಅಲೆದಾಡದೇ ಮನೆಯಲ್ಲಿಯೇ ಕುಳಿತು ದಾಖಲೆ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಡಿಜಿಟಲೀಕರಣ ನಡೆದಿದೆ.
ತಾಲೂಕಿನಲ್ಲಿ ಕೆಲವರಿಗೆ ಫೌತಿ ಖಾತೆ ನೀಡುವಲ್ಲಿ ಕೆಲ ಸಮಸ್ಯೆಗಳು ಎದುರಾಗಿವೆ ಎಂದು ಶಾಸಕ ದಿನಕರ ಶೆಟ್ಟಿ ಸಚಿವರ ಗಮನ ಸೆಳೆದರು. ಬಳಿಕ ಫೌತಿ ಖಾತೆ ಪಡೆಯಲು ಸಮಸ್ಯೆ ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳ ಮನೆಗೆ ತೆರಳಿದ ಸಚಿವರು, ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಂದ ಸಮಸ್ಯೆಯ ವಿವರಣೆ ಪಡೆದರು. ಕುಮಟಾ ತಾಲೂಕು ಸೌಧಕ್ಕೆ ಭೇಟಿಗೂ ಮುನ್ನ ಶಿರಸಿ-ಕುಮಟಾ ರಸ್ತೆಯ ಗುಡ್ಡ ಕುಸಿತದ ಪ್ರದೇಶವನ್ನು ಸಚಿವರು ವೀಕ್ಷಿಸಿದರು.
ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ಹೊನ್ನಾವರ ತಹಸೀಲ್ದಾರ್ ಪ್ರವೀಣ ಕರಾಂಡೆ, ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಇತರರು ಇದ್ದರು.