ಬಸವನಹಳ್ಳಿ ಕೆರೆ ಅಭಿವೃದ್ಧಿಗೆ 8.5 ಕೋಟಿ ರೂ. ಬಿಡುಗಡೆ

c.t.ravi
Published on

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಮೊದಲ ಕಂತಾಗಿ 8.5 ಕೋಟಿ ರೂ.ಗಳನ್ನು ರಾಜ್ಯ ಪ್ರವಾಸೋದ್ಯಮ ಮೂಲ ಸೌಕರ್ಯ ನಿಯಮಿತ(ಕೆಟಿಐಎಲ್)ದ ವ್ಯವಸ್ಥಾಪಕ ನಿರ್ದೇಶಕರಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಒಟ್ಟು 36 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬೆಂಗಳೂರಿನ ಮೆ.ಟೆರಾ ಫಾರ್ಮಾ ಸಮಾಲೋಚನಾ ಸಂಸ್ಥೆ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅದರಂತೆ ಬಸವನಹಳ್ಳಿ ಕೆರೆಯ ಏರಿ ಅಗಲೀಕರಿಸಿ ಸದೃಢಗೊಳಿಸುವುದು, ದ್ವೀಪ ಪ್ರದೇಶ ಅಭಿವೃದ್ಧಿಪಡಿಸಿ ವಿವೇಕಾನಂದ ಪ್ರತಿಮೆ ನಿರ್ಮಿಸುವುದು, ಕೆರೆಯ ನೀರನ್ನು ಶುದ್ಧೀಕರಿಸಿ ಕೆರೆ ಪ್ರವೇಶಿಸುತ್ತಿರುವ ನಗರದ ಕೊಳಚೆ ನೀರು ತಡೆಯಲು ಎಸ್‍ಟಿಪಿ ಅಳಡಿಸುವುದು, ಫುಡ್‌ ಕೋರ್ಟ್, ಸ್ವಾಗತ ಕಮಾನು, ಎಂಟ್ರಿ ಫ್ಲಾಜಾ, ಜಿಮ್, ಜಾಗಿಂಗ್ ಟ್ರ್ಯಾಕ್, ಸೈಕಲ್ ಟ್ರ್ಯಾಕ್, ಕೆಫೆಟೇರಿಯಾ, ಮಕ್ಕಳ ಉದ್ಯಾನ ಅಂಪೀಥಿಯೇಟರ್, ವಾಹನ ನಿಲ್ದಾಣ, ಜಲಕ್ರೀಡೆ ಮತ್ತು ಉದ್ಯಾನ, ಮಳಿಗೆಗೆ ಸಮುಚ್ಛಯ, ಹೈಮಾಸ್ಟ್ ಲೈಟಿಂಗ್, ಕುಡಿಯುವ ನೀರು, ಶೌಚಾಲಯ, ಬೋಟ್ ಜೆಟ್ಟಿ, ಕಲಾಕೃತಿಗಳ ಪ್ರದರ್ಶನದ ಆವರಣ, ಟಿಕೆಟಿಂಗ್ ಬ್ಲಾಕ್ ವಿವಿಧೋದ್ಧೇಶ ಸಾಂಸ್ಕøತಿಕ ಕೇಂದ್ರ ನಿರ್ಮಾಣ ಇತ್ಯಾದಿ ಯೋಜನಾ ವರದಿಯಲ್ಲಿ ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳನ್ನು ಕರ್ನಾಟಕ ಮೂಲ ಸೌಕರ್ಯ ನಿಯಮಿತದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು ಅದರಂತೆ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಮೊದಲ ಕಂತಿನ 8.5 ಕೋಟಿ ರೂ. ಬಳಸಿಕೊಳ್ಳಲು ಸರ್ಕಾರದಿಂದ ಅನುಮೋದನೆ ದೊರಕಿದೆ. ಇದಲ್ಲದೆ ಕೆರೆ ಏರಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಅನುದಾನ ಮಂಜೂರಾಗಿದ್ದು ಈ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಕಾರ್ಯಗತಗೊಳಿಸಲಾಗುವುದು. ಜತೆಗೆ ನಗರಾಭಿವೃದ್ಧಿ ಇಲಾಖೆಯಿಂದ ಕೆರೆಗೆ ಗಾಳಿ ರಂಧ್ರ(ಏರೆಟರ್)ಗಳನ್ನು ಅಳವಡಿಸಲಾಗುವುದು. ಒಟ್ಟಾರೆಯಾಗಿ ನಗರದ ಬಸವನಹಳ್ಳಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net