ನರೇಗಾ ಕಾಮಗಾರಿಗೆ 71.63 ಲಕ್ಷ ರೂ. ಖರ್ಚು

18 HANUR 2
ಲೊಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ಧ ಗ್ರಾಮದಲ್ಲಿ ನರೇಗಾ ಗ್ರಾಮಸಭೆಯಲ್ಲಿ ತಾಲೂಕು ಸಂಯೋಜಕ ನಾರಾಯಣ್ ಮಾತನಾಡಿದರು. ಮಂಗಳ, ನಂದಿನಿ, ಸಿದ್ಧೇಗೌಡ, ಮುತ್ತುಸ್ವಾಮಿ, ರಘುನಾಥ್, ಅನ್ವರ್‌ಖಾನ್ ಇದ್ದರು.
Published on

 ಹನೂರು : ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅವಧಿಗೆ ನರೇಗಾ ಯೋಜನೆಯಡಿ 185 ಕಾಮಗಾರಿಗಳು ನಡೆದಿದ್ದು, 71.63 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣ್ ತಿಳಿಸಿದರು.

ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆ ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ 100 ದಿನಗಳ ಕಾಲ ಉದ್ಯೋಗವನ್ನು ಪಡೆಯಬಹುದು. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಪಂ ವತಿಯಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ದನದ ಕೊಟ್ಟಿಗೆ, ಕೋಳಿ ಘಟಕ, ವಸತಿ ಯೋಜನೆಗ ಅನುದಾನ, ಹಳ್ಳ, ಕಾಲುವೆ ಹೂಳೆತ್ತುವ ಕಾಮಗಾರಿ, ಸೇಬಿನಕೋಬೆ ಶಾಲೆಗೆ ಶೌಚಗೃಹ ನಿರ್ಮಾಣ ಸೇರಿದಂತೆ 185 ಕಾಮಗಾರಿಗಳು ನಡೆದಿದೆ. ಕೂಲಿ ವೆಚ್ಚ 70,86,662 ರೂ. ಹಾಗೂ ಸಾಮಾಗ್ರಿ ವೆಚ್ಚ 76,721 ರೂ. ಸೇರಿದಂತೆ 71,63,383 ರೂ. ಅನುದಾನ ಖರ್ಚು ಮಾಡಲಾಗಿದೆ. ನಡೆದಿರುವ ಕಾಮಗಾರಿಗಳನ್ನು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಗ್ರಾಮಸ್ಥರು ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರದಲ್ಲಿ ತಲೆದೂರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಅಗತ್ಯ ಕ್ರಮವಹಿಸುವುದಾಗಿ ಪಿಡಿಒ ಭರವಸೆ ನೀಡಿದರು.

ಇದೇ ವೇಳೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ 15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಖರ್ಚು ವೆಚ್ಚದ ವಿವರವನ್ನು ಮಂಡಿಸಲಾಯಿತು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳ, ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಸಿದ್ದೇಗೌಡ, ಮುತ್ತುಸ್ವಾಮಿ, ಸಿಆರ್‌ಪಿ ಅನ್ವರ್‌ಖಾನ್, ಪಿಡಿಒ ರಘುನಾಥ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net