

ಗದಗ: ಇಲ್ಲಿನ ಹೊರ ವರ್ತುಲ ರಸ್ತೆ (ರಿಂಗ್ ರೋಡ್) ಮತ್ತು ನಗರದ ವಿವಿಧೆಡೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 700 ಕೋಟಿ ರೂ. ಮಂಜೂರು ಬಿಡುಗಡೆ ಮಾಡಿದೆ.
ಇದಕ್ಕೆ ಸಹಕರಿಸಿದ ಮಾಜಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹಾಗೂ ಸಂಸದ ಶಿವಕುಮಾರ ಉದಾಸಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊರ ವರ್ತುಲ ರಸ್ತೆ ನಿರ್ಮಾಣದ ಭೂ ಸ್ವಾಧೀನ ಪ್ರಕ್ರಿಯೆಗೆ 76 ಕೋಟಿ ರೂ. ಬಿಡುಗಡೆ ಆಗಿದೆ. ಮತ್ತು ಅಪೂರ್ಣಗೊಂಡಿರುವ ರಿಂಗ್ ರಸ್ತೆಯನ್ನು ಪೂರ್ಣಗೊಳಿಸಬೇಕೆಂಬುದು ಅವಳಿ ನಗರ ಜನರ ದಶಕಗಳ ಬೇಡಿಕೆಯಾಗಿತ್ತು.
ಅದರಂತೆ, ಕಳೆದ ವರ್ಷ ರಿಂಗ್ ರೋಡ್ ನಿರ್ಮಾಣಕ್ಕೆ 219 ಕೋಟಿ ರೂ. ಅನುದಾನಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಮಂಜೂರಾತಿ ನೀಡಿತ್ತು. ಶೀಘ್ರದಲ್ಲೇ ಭೂ ಸ್ವಾಧೀನ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅವಳಿ ನಗರ ಸೇರಿ ಜಿಲ್ಲೆಯ 5 ಕಡೆ ಮೇಲ್ಸೇತುವೆ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣವು ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜಿಲ್ಲೆಯ ರಸ್ತೆ ಅಭಿವೃದ್ಧಿ ವಿಭಾಗದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ಅಲ್ಲದೆ, ಮೇಲ್ಸೇತುವೆ ನಿರ್ಮಿಸಬೇಕೆಂಬ ಗದಗ- ಬೆಟಗೇರಿ ಅವಳಿ ನಗರ ಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇಕ್ಕಟ್ಟಾದ ಅಂಡರ್ ಪಾಸ್ ಇರುವುದರಿಂದ ಇಲ್ಲಿ ಬೃಹತ್ ಗಾತ್ರದ ವಾಹನಗಳು ಸಾಗಿ ಬರುವುದೇ ಕಷ್ಟವಾಗಿದೆ. ಅತೀ ಉದ್ದದ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಹ ದುಸ್ಥಿತಿ ಇದೆ. ಇದೀಗ ಮೇಲ್ಸೇತುವೆ ನಿರ್ಮಾಣವಾಗಲಿರುವುದರಿಂದ ವಾಹನ ಸವಾರರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.