

ಎಚ್.ಡಿ.ಕೋಟೆ: ಪಟ್ಟಣದ ಪುರಸಭಾ ಕಚೇರಿಯಲ್ಲಿ ಪುರಸಭಾ ಅಧ್ಯಕ್ಷೆ ಶಿವಮ್ಮ ಚಾಕಳ್ಳಿ ಕೃಷ್ಣ ಅಧ್ಯಕ್ಷತೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಧುಕುಮಾರ್ 2025-26ನೇ ಸಾಲಿಗೆ 65.24 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಮಂಡನಾ ಸಭೆಯಲ್ಲಿ ಮಾತನಾಡಿದ ಮಧುಕುಮಾರ್, ಆಸ್ತಿ ತೆರಿಗೆಯಿಂದ 1.95 ಕೋಟಿ ರೂ., ನೀರಿನ ತೆರಿಗೆಯಿಂದ 45 ಲಕ್ಷ ರೂ., ಮಳಿಗೆಗಳ ಬಾಡಿಗೆಯಿಂದ 8 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 12 ಲಕ್ಷ ರೂ., ನೆಲ ಬಾಡಿಗೆಯಿಂದ 23.55 ಲಕ್ಷ ರೂ. ಸೇರಿದಂತೆ ಇತರ ಮೂಲಗಳಿಂದ 23.5 ಲಕ್ಷ ರೂ. ಆದಾಯ ಬರಲಿದೆ. ಅಂತೆಯೇ ಸರ್ಕಾರದಿಂದ 15ನೇ ಹಣಕಾಸು ಅನುದಾನ 98 ಲಕ್ಷ ರೂ., ಎಸ್‌ಎಫ್‌ಸಿ ಅನುದಾನ 15 ಲಕ್ಷ ರೂ., ವಿದ್ಯುತ್ ಶಕ್ತಿ ಅನುದಾನದಿಂದ 2.2 ಕೋಟಿ ರೂ., ವೇತನ ಅನುದಾನ 2.6 ಕೋಟಿ ರೂ., ಕುಡಿಯುವ ನೀರಿನ ಅನುದಾನ 8 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದರು.
ಬೀದಿ ದೀಪ ನಿರ್ವಹಣೆಗೆ 22 ಲಕ್ಷ ರೂ., ವಾಹನಗಳ ಇಂಧನ, ದುರಸ್ತಿ ಮತ್ತು ನಿರ್ವಹಣೆಗೆ 35.70 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ 60 ಲಕ್ಷ ರೂ., ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 7 ಲಕ್ಷ ವೆಚ್ಚವಾಗಲಿದೆ. ಇನ್ನು ನೀರು ಸರಬರಾಜು ವಿಭಾಗದ ದುರಸ್ತಿ ಮತ್ತು ನಿರ್ವಹಣೆಗೆ 30 ಲಕ್ಷ ರೂ., ಬ್ಲೀಚಿಂಗ್ ಪೌಡರ್ ಹಾಗೂ ಆಲಂ ಸರಬರಾಜಿಗೆ 4 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ ಪಾವತಿಗೆ 30 ಲಕ್ಷ ರೂ., ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್‌ಗಳಿಗೆ 5 ಲಕ್ಷ ರೂ., ರಸ್ತೆಗಳು, ಚರಂಡಿ ನಿರ್ಮಾಣಕ್ಕೆ 1.50 ಕೋಟಿ ರೂ., ನಾಗರಿಕ ವಿನ್ಯಾಸಗಳಿಗೆ 15 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 38 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ 45 ಲಕ್ಷ ರೂ. ವ್ಯಯವಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪದಡಿ ಪಟ್ಟಣದಲ್ಲಿ ಮನೆ ಹಾನಿಗೊಳಗಾದಲ್ಲಿ ಪುರಸಭೆಯಿಂದ ಸಹಾಯಧನದ ರೂಪದಲ್ಲಿ 20,000 ರೂ. ನೀಡಲಾಗುವುದು. ಹುಣಸೂರು-ಬೇಗೂರು ಮುಖ್ಯ ರಸ್ತೆಯ ಚಿತ್ತಧಾಮದ ಬಳಿ ಸ್ವಾಗತ ಕಮಾನು ನಿರ್ಮಾಣಕ್ಕೆ 8 ಲಕ್ಷ ರೂ. ಮೀಸಲಿಡಲಾಗಿದೆ. ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯೀಕರಣಕ್ಕಾಗಿ 2 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.
ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಪುಟ್ಟ ಬಸವನಾಯಕ, ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ನಂಜಪ್ಪ, ಪ್ರೇಮ್‌ಸಾಗರ್, ರಾಜು, ಲೋಕೇಶ್, ದರ್ಶಿನಿ, ಕವಿತಾ, ನಂದಿನಿ, ಸಾಯಿರಾ ಬಾನು ಸರೋಜಮ್ಮ ಅನಿತಾ, ಶಾಂತಮ್ಮ, ಸುಹಾಸಿನಿ, ಗೀತಾ, ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್, ಸೂರ್ಯ ಕುಮಾರ್, ಅನಿಲ್, ಪಾರ್ಥಸಾರಥಿ, ಸೈಯದ್ ಹಬೀಬ್, ಅಧಿಕಾರಿಗಳಾದ ನಳಿನಿ, ಲಕ್ಷ್ಮೀದೇವಿ, ಸುಭಾಷ್, ರಾಣಿ, ರಘು ಪರಮೇಶ್, ವಿನೋದ್, ಕೃತಿಕ್ ಇದ್ದರು.