

ಜಮಖಂಡಿ: ನಗರಸಭೆಯ ಪ್ರಸಕ್ತ ಸಾಲಿನ ಆಯವ್ಯಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ 6.60 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ನಂತರ ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, 34.84 ಕೋಟಿ ರೂ. ಆದಾಯ ನೀರಿಕ್ಷಿಸಿದ್ದು, 34.78 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ನಗರದ ದೇಸಾಯಿ ವೃತ್ತವನ್ನು ಅಂದಾಜು 40 ಲಕ್ಷ ರೂ.ಗಳಲ್ಲಿ ಅಭಿವೃದ್ಧಿಪಡಿಸಿ ಟ್ರಾಪಿಕ್ ಸಿಗ್ನಲ್ ಅಳವಡಿಸಲಾಗುವುದು. ನಾಡಿನ ಒಳಗಡೆ ಕಾಡು ಎಂಬ ಶಿರ್ಷಿಕೆ ಅಡಿಯಲ್ಲಿ ಉದ್ಯಾನ ಅಭಿವೃದ್ಧಿಗೆ 20 ಲಕ್ಷ ರೂ., ಶಿವಾಜಿ ವೃತ್ತ ಅಭಿವೃದ್ಧಿಗೆ 15 ಲಕ್ಷ ರೂ., ಟಿಪ್ಪು ಸುಲ್ತಾನ ಸರ್ಕಲ್ ಅಭಿವೃದ್ಧಿ ಹಾಗೂ ಟ್ರಾಪಿಕ್ ಸಿಗ್ನಲ್ ಅಳವಡಿಕೆಗೆ 15 ಲಕ್ಷ ರೂ., ಪರಶುರಾಮ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ರೂ., ಹಿಂದು ರುದ್ರಭೂಮಿ ಅಭಿವೃದ್ಧಿಗೆ 40 ಲಕ್ಷ ರೂ., ಮುಸ್ಲಿಂ ಸ್ಮಶಾನ ಅಭಿವೃದ್ಧ್ದಿಗೆ 20 ಲಕ್ಷ ರೂ., ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ, ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಸಾಗಿಸಲು ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಎಲ್ಲ ವಾರ್ಡ್‌ಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಹಣ ಕಾಯ್ದಿರಿಸಲಾಗಿದೆ ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ನಗರದಲ್ಲಿ ಜನ, ವಾಹನ ದಟ್ಟನೆ ಹೆಚ್ಚಾಗಿದೆ. ಆನಿಟ್ಟಿನಲ್ಲಿ 2 ಸಾವಿರ ಎಕರೆ ಪ್ರದೇಶ ನೀಡುವಂತೆ ಸಚಿವರಿಗೆ ತಿಳಿಸಲಾಗಿದೆ. ಆಲಮಟ್ಟಿ ಹಿನ್ನೀರಿನಿಂದ 22 ಗ್ರಾಮಗಳು ಜಮಖಂಡಿ ನಗರವನ್ನೆ ಅವಲಂಬಿಸಿವೆ. ಗ್ರಾಮ ಪಂಚಾಯತನವರು ನಗರದಲ್ಲಿರುವ ಹಾಗೂ ಹೊಂದಿಕೊಂಡಿರುವ ವ್ಯಾಪ್ತಿಯನ್ನು ನಗರಸಭೆಗೆ ಬಿಟ್ಟುಕೊಟ್ಟರೆ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಹಾಗೂ ನಗರಸಭೆಗೆ ಆದಾಯ ಹೆಚ್ಚಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ ಇದ್ದರು.
ನಗರಸಭೆಯ ಬಜೆಟ್ ಸಭೆಗೆ 31 ಸದಸ್ಯರ ಪೈಕಿ 11 ಸದಸ್ಯರು ಮಾತ್ರ ಹಾಜರಿದ್ದರು, ನಗರಸಭೆಯ ಆವರಣದಲ್ಲಿದ್ದ ಕೆಲ ಸದಸ್ಯರನ್ನು ಕರೆಯಿಸಿ ಸಭೆ ಪ್ರಾರಂಭಿಸಲಾಯಿತು. ಸದಸ್ಯರು ಆಗಮಿಸುವವರೆಗೆ ವೇದಿಕೆಯಲ್ಲಿ ಅಧ್ಯಕ್ಷ ಪರಮಾನಂದ ಗವರೋಜಿ, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಪೌರಾಯುಕ್ತ ಜ್ಯೋತಿ ಗಿರೀಶ ಕೆಲಕಾಲ ಹೊತ್ತಿನವರಿಗೆ ಕಾಯ್ದು ಕುಳಿತ ಪ್ರಸಂಗ ನಡೆಯಿತು.