ಹೈಟೆಕ್ ಲ್ಯಾಬ್ ನಿರ್ಮಾಣಕ್ಕೆ 50 ಲಕ್ಷ ರೂ.

27Huk2
Published on

ಹುಕ್ಕೇರಿ: ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೈಟೆಕ್ ಪ್ರಯೋಗಾಲಯ ನಿರ್ಮಿಸಲು ಆರೋಗ್ಯ ಇಲಾಖೆಯಿಂದ 50 ಲಕ್ಷ ರೂ. ಮಂಜೂರಾಗಿದೆ. ರೋಗಿಗಳಿಗೆ ಅನುಕೂಲವಾಗುವಂತೆ ಕೆಳ ಅಂತಸ್ತಿನಲ್ಲಿ ರಕ್ತ, ಮೂತ್ರ ಸಂಗ್ರಹಿಸಿಕೊಳ್ಳುವುದು. ಮೇಲಂತಸ್ತಿನಲ್ಲಿ ಸುಸಜ್ಜಿತ ಪ್ರಯೋಗಾಲಯ ನಿರ್ಮಿಸಲು ನಕ್ಷೆ ರೂಪಿಸಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪ್ರಯೋಗಾಲಯದ ಸ್ಥಳ ವೀಕ್ಷಿಸಿ ಮಾತನಾಡಿ, ನಿತ್ಯ 400ರಿಂದ 500 ರೋಗಿಗಳು ತಪಾಸಣೆಗೆ ಆಗಮಿಸುತ್ತಾರೆ. 20ರಿಂದ 25 ಒಳರೋಗಿಗಳು ಇರುತ್ತಾರೆ. ಹಾಗಾಗಿ ಈಗಿರುವ ಸೌಲಭ್ಯಗಳ ಜತೆಗೆ ಹೆಚ್ಚುವರಿಯಾಗಿ ಡಯಾಲಿಸಿಸ್ ಕೇಂದ್ರ ಉನ್ನತೀಕರಣ, ಸಿಬ್ಬಂದಿ ವಸತಿ ಗೃಹ ನಿರ್ಮಿಸಲಾಗುತ್ತಿದೆ. ತಜ್ಞವೈದ್ಯರ ಜತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಆಸ್ಪತ್ರೆ ಕಟ್ಟಡ ಕೆಲವೆಡೆ ಹಾಳಾಗಿದ್ದು ವರದಿ ಸಲ್ಲಿಸಲು ಮುಖ್ಯ ವೈದ್ಯಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಶುಚಿತ್ವ ಕಾಯ್ದುಕೊಳ್ಳಿ: ಆಸ್ಪತ್ರೆ ಮುಂದು ಶುಚಿತ್ವ ಕಾಯ್ದುಕೊಳ್ಳುವಂತೆ ಪುರಸಭೆಯವರಿಗೆ ತಿಳಿಸಲು ವೈದ್ಯರು ಮನವಿ ಮಾಡಿದರು. ತಕ್ಷಣ ಪುರಸಭೆ ಅಭಿಯಂತ ರಾಜಶೇಖರ ಪಟ್ಟಣಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಸಿ ವಾರದೊಳಗಾಗಿ ಚರಂಡಿ ಸ್ವಚ್ಛತೆ ಮಾಡುವಂತೆ ಹಾಗೂ ಬೀದಿಬದಿ ಹೋಟೆಲ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಇದಕ್ಕೂ ಮೊದಲು ಪ್ರವಾಹಪೀಡಿತ ಯರನಾಳ, ಬಡಕುಂದ್ರಿ, ಗೌಡವಾಡ ಪ್ರದೇಶಗಳಿಗೆ ಭೇಟಿ ನೀಡಿದರು.

ವೈದ್ಯಾಧಿಕಾರಿಗಳಾದ ಉದಯ ಕುಡಚಿ, ಎಂ.ಎಂ.ನರಸನ್ನವರ, ಆರೋಗ್ಯ ಇಲಾಖೆ ಅಭಿಯಂತರ ಕಿಶೋರ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮುಖಂಡರಾದ ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ಎಸ್.ಆರ್.ಕರ್ಕಿನಾಯಿಕ, ರಾಜು ಮುನ್ನೋಳಿ, ಸೋಮಶೇಖರ ಪರಕನಟ್ಟಿ, ಚನ್ನಪ್ಪ ಗಜಬರ, ಪುಟ್ಟು ಖಾಡೆ, ರವಿ ಪರಕನಟ್ಟಿ, ಮಧುಕರ ಕರನಿಂಗ, ಸುಹಾಸ ನೂಲಿ, ಕಲಗೌಡ ಮಲಗೌಡನವರ, ಅನ್ನಪ್ಪ ಹಿಟ್ಟಣಗಿ, ದಯಾನಂದ

ಅಮ್ಮಣಗಿ, ಭರತೇಶ ನಾಯಿಕ, ಶಿವನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net