ಕುಂದಗೋಳ ಕ್ಷೇತ್ರಾಭಿವೃದ್ಧಿಗೆ ರೂ. 50 ಕೋಟಿ ಅನುದಾನ

KND SHIVALLI
Published on

ಕುಂದಗೋಳ: ಮತಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಕಾಂಗ್ರೆಸ್ ಸರ್ಕಾರದಿಂದ 50 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತರಲಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿಯವರು ಅನುದಾನ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನೀರಾವರಿ ಇಲಾಖೆಯಿಂದ 6 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಇದರಲ್ಲಿ ರಟ್ಟಿಗೇರಿ, ಯರಗುಪ್ಪಿ ಸೇರಿ ವಿವಿಧ ಗ್ರಾಮಗಳ ಕೆರೆಗಳನ್ನು ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುವುದು. ತಾಲೂಕಿನ ಗುಡಗೇರಿ, ರೊಟ್ಟಿಗವಾಡ, ಹಿರೇಗುಂಜಳ, ಯರಗುಪ್ಪಿ, ರಾಮನಕೊಪ್ಪ ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಸುಮಾರು 2 ಕೋಟಿ 22 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಬೆನಕನಹಳ್ಳಿ ಗ್ರಾಮದ ಆಶ್ರಯ ನಿವೇಶನ ನಿರ್ವಿುಸಲು 4 ಎಕರೆ ಜಮೀನಿಗೆ ಅಂದಾಜು 36 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.

ಗೌಡಪ್ಪಗೌಡ ಪಾಟೀಲ ಮಾತನಾಡಿ, ಸದ್ಯ ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ ಇದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವತಿಯಿಂದ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತಂದು ಹಿಂದುಳಿದ ತಾಲೂಕು ಎಂಬ ಪಟ್ಟಿಯನ್ನು ಅಳಿಸಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದರು.

ಚಂದ್ರಶೇಖರ ಜುಟ್ಟಲ್, ಪೋಲೀಸ್​ಗೌಡ ಪಾಟೀಲ, ವಿಜಯಕುಮಾರ ಹಾಲಿ, ಎಂ.ಬಿ. ಪಾಟೀಲ ಸಲೀಂ ಕ್ಯಾಲಕೊಂಡ ಮಾತನಾಡಿದರು. ಸಕ್ರು ಲಮಾಣಿ, ಸಿದ್ದಣ್ಣ ಹುಣಸನವರ, ಗುರು ಛಲವಾದಿ, ಸಲೀಂ ಕಡ್ಲಿ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net