

ಉಪ್ಪಿನಂಗಡಿ: ಇಲ್ಲಿನ ಅಡಕೆ ಅಂಗಡಿಯೊಳಗಿಂದ 5 ಲಕ್ಷ ರೂ. ಕದ್ದೊಯ್ದ ಘಟನೆಗೆ ಸಂಬಂಧಿಸಿ ಪೊಲೀಸರಿಂದ ಮಹತ್ವದ ಸುಳಿವು ಸಂಗ್ರಹಿಸಲ್ಪಟ್ಟಿದ್ದು, ತನಿಖೆ ಬಿರುಸಿನಿಂದ ಸಾಗಿದೆ.
ಇಲ್ಲಿನ ಗಾಂಧೀ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾಡುತ್ಪತ್ತಿ ಮತ್ತು ಅಡಕೆ ವ್ಯಾಪಾರ ನಡೆಸುವ ಉದ್ಯಮಿ ವಸಂತ ಗೌಡ ಎಂಬುವರ ಅಂಗಡಿಯಲ್ಲಿ ಕಳವು ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಪರಿಸರದ ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಈ ವೇಳೆ ಮಹತ್ವದ ಸುಳಿವು ದೊರಕಿದೆ ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸಂಶಯಾಸ್ಪದವಾಗಿ ಗೋಚರಿಸಿದ ಹಳೇ ಬೈಕ್ ಒಂದು ಈ ಪ್ರಕರಣದಲ್ಲಿ ಕೇಂದ್ರಬಿಂದುವಾಗಿದ್ದು, ಅದನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕಾಣಿಸಿದ ಬೈಕ್ ಕಳೆದ ತಿಂಗಳಲ್ಲಿ ಬೆಳ್ತಂಗಡಿ ಸಮೀಪ ಘಟಿಸಿದ ಕಳವು ಪ್ರಕರಣದಲ್ಲಿ ಕಾಣಿಸಿದ ಬೈಕ್‌ಗೆ ಸಾಮ್ಯತೆ ಇದ್ದು, ಎರಡೂ ಪ್ರಕರಣದಲ್ಲಿ ತಂಡವೊಂದು ಭಾಗಿಯಾಗಿರುವ ಸಂಭವವಿದೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಸಾಗುತ್ತಿದೆ.