ಪತ್ರಕರ್ತರಿಗೆ 5 ಲಕ್ಷ ರೂ. ಆರೋಗ್ಯ ವಿಮೆ : ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

mysore district journalists association
Published on

ಮೈಸೂರು: ರಾಜ್ಯದ ಪತ್ರಕರ್ತರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಉಚಿತ ಆರೋಗ್ಯ ಸೇವೆ ಒದಗಿಸುವ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.1 ರಂದು ಪತ್ರಿಕಾ ದಿನಾಚರಣೆ ಸಂದರ್ಭ ಚಾಲನೆ ನೀಡುವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಹಸಿವು ಹಾಗೂ ಮಾಧ್ಯಮ ಸೂಚ್ಯಾಂಕದಲ್ಲಿ ದೇಶದ ಸ್ಥಾನ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಈ ಬಗ್ಗೆ ಪತ್ರಕರ್ತರು ಚಿಂತನೆ ನಡೆಸುವ ಅವಶ್ಯಕತೆ ಇದೆ. ಜಾತ್ಯತೀಯ ಪದವನ್ನು ಸಂವಿಧಾನದಿಂದ ಕಿತ್ತುಹಾಕಬೇಕು ಎಂಬ ಒತ್ತಡ ಕೇಳಿ ಬರುತತಿದೆ. ಈ ಬಗ್ಗೆ ಮಾಧ್ಯಮ ಗಮನ ಸೆಳೆಯಬೇಕು. ಶತಮಾನಗಳ ಇತಿಹಾಸ ಪತ್ರಿಕೋದ್ಯಮ ಹೊಂದಿದ್ದು, ಹಿರಿಯರು ಗಟ್ಟಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಹೀಗಾಗಿ ಅನೇಕ ಸವಾಲುಗಳ ನಡುವೆಯೂ ಭದ್ರವಾಗಿದೆ. ಈ ಭದ್ರ ಬುನಾದಿಯನ್ನು ಯುವಪೀಳಿಗೆ ಮುಂದುವರಿಸಿಕೊಅಡು ಹೋಗಬೇಕೆಂದರು.

ಈ ಸಂದರ್ಭ ಹಿರಿಯ ಪತ್ರಕರ್ತ ಎ.ಸಿ. ಪ್ರಭಾಕರ್ ಅವರಿಗೆ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಪ್ರಶಸ್ತಿ ಪುರಸ್ಕೃತರಾದ ‘ವಿಜಯವಾಣಿ’ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ, ಮುಖ್ಯ ವರದಿಗಾರ ಆರ್. ಕೃಷ್ಣ, ಹಿರಿಯ ಛಾಯಾಗ್ರಾಹಕ ಕೆ.ಎಚ್. ಚಂದ್ರು, ಬೆಟ್ಟದಪುರ ವರದಿಗಾರ ಪುನೀತ್ ಚಪ್ಪರದಳ್ಳಿ, ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್.ಟಿ. ರವಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪತ್ರಕರ್ತರ ಡಯಾಲಿಸಿಸ್ ಸೌಲಭ್ಯಕ್ಕೆ ನೆರವಾಗಲೆಂದು ಜಿಎಸ್‌ಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀಹರಿ ದ್ವಾರಕಾನಾಥ್ 1 ಲಕ್ಷ ರೂ. ದೇಣಿಗೆ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಜಿಎಸ್‌ಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀಹರಿ ದ್ವಾರಕಾನಾಥ್, ಶಾಸಕ ದರ್ಶನ್ ಧ್ರುವನಾರಾಯಣ್, ಸಂಘದ ಅಧ್ಯಕ್ಷ ಕೆ. ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net