ಬಸನಕಟ್ಟೆ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರು

Rs. 5 crore for the development of Basanakatte Lake
Published on

ಬ್ಯಾಡಗಿ: ಪಟ್ಟಣದ ಮಧ್ಯಭಾಗದಲ್ಲಿರುವ ಬಸನಕಟ್ಟೆ ಕೆರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರಾಗಿದೆ. ಕೆರೆ ಅಭಿವೃದ್ಧಿಪಡಿಸಿ, ಪೈಪ್​ಲೈನ್ ಮೂಲಕ ಹೊಳೆ ನೀರು ತುಂಬಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಸನಕಟ್ಟೆ ಅಭಿವೃದ್ಧಿಗೊಳಿಸುವಂತೆ ಸಂಘ, ಸಂಸ್ಥೆಗಳು ಹೋರಾಟ ಮಾಡಿದ್ದವು. ಜಲಮೂಲವಾಗಿರುವ ಬಸನಕಟ್ಟೆ ಹೂಳೆತ್ತಿ, ಸುತ್ತಲೂ ರಕ್ಷಣೆ ಗೋಡೆ ನಿರ್ವಿುಸಿ ಸಂಪೂರ್ಣ ಅಭಿವೃದ್ಧಿಪಡಿಸಲಾಗುತ್ತಿದೆ. ಪಕ್ಕದ ಕುಡಿಯುವ ನೀರಿನ ಹೊಂಡದಂತೆ ಇದಕ್ಕೂ ಹೊಳೆ ನೀರು ತುಂಬಿಸಲಾಗುವುದು ಎಂದುರ.

10 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ನಿರ್ವಿುಸುವ ಕಾಮಗಾರಿ ಭರದಿಂದ ಸಾಗಿದೆ. ಬಡವರಿಗೆ ಆಶ್ರಯ ಮನೆ ಹಂಚಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶೀಘ್ರದಲ್ಲೆ ಪರಿಹಾರ ಕಲ್ಪಿಸಲಾಗುವುದು. ಜನಸಂಖ್ಯೆಗೆ ಏರಿಕೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಪೂರೈಸಲು ಹೊಸ ಪೈಪ್​ಲೈನ್ ಅಳವಡಿಸುವ ಯೋಜನೆಗೆ ಡಿಪಿಆರ್ ಸಿದ್ಧಗೊಂಡಿದೆ ಎಂದರು.

ಸದಸ್ಯ ಬಸವರಾಜ ಛತ್ರದ ಮಾತನಾಡಿ, ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಕಟ್ಟಡ ನಿರ್ವಿುಸುವಾಗ ನಿಯಮ ಪಾಲಿಸಿಲ್ಲ. ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತು ಎನ್​ಒಸಿ ನೀಡುತ್ತಿದ್ದಾರೆ. ವಾಣಿಜ್ಯ ಮಳಿಗೆ ಮಾಲೀಕರು ತಮ್ಮ ಅಂಗಡಿ ಎದುರು ವಾಹನಗಳು ನಿಲ್ಲಲು ಜಾಗ ಬಿಟ್ಟಿಲ್ಲ. ರಸ್ತೆ ಮೇಲೆ ಬೈಕ್ ನಿಲ್ಲಿಸುವ ಮೂಲಕ ಟ್ರಾಫಿಕ್ ಜಾಮ್ ಆಗುತ್ತಿದೆ. ನನ್ನ ವಾರ್ಡ್​ನ ಬನಶಂಕರಿ ಗುಡಿ ರಸ್ತೆಯಲ್ಲಿ ಕಾರುಗಳು ತೆರಳಲು ಬಾರದಂತೆ ಕಟ್ಟಡ ನಿರ್ವಣವಾಗಿವೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ, ಈವರೆಗೆ ಎಷ್ಟು ಜನರಿಗೆ ನೋಟಿಸ್ ಜಾರಿಗೊಳಿಸಿದ್ದೀರಿ ಎಂದು ಹರಿಹಾಯ್ದ ಅವರು, ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ ಮುಂದಿನ ಸಭೆಯಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, 2 ವರ್ಷದಿಂದ ಎನ್​ಒಸಿ ನೀಡಿರುವ ಕಟ್ಟಡಗಳ ಪುನರ್ ಪರಿಶೀಲನೆ ನಡೆಸಿ, ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

13ನೇ ವಾರ್ಡ್ ಸದಸ್ಯ ಶಂಕರ ಕುಸಗೂರು ಮಾತನಾಡಿ, ಮೂರು ವರ್ಷಗಳಿಂದ ಸಭೆಯಲ್ಲಿ ಪ್ರಸ್ತಾಪಿಸಿ, ದೂರು ಸಲ್ಲಿಸಿದ್ದೇನೆ, ನಾಗರಿಕರೊಂದಿಗೆ ಆಗಮಿಸಿ ಖುದ್ದಾಗಿ ಸಮಸ್ಯೆ ತಿಳಿಸಿದ್ದೇನೆ. ಆದರೆ, ಯಾವುದೇ ಪರಿಹಾರ ಸಿಗುತ್ತಿಲ್ಲ. ಹೊಳೆ ನೀರು ಪೂರೈಸುವುದಾಗಿ ಹೇಳುತ್ತೀರಿ. ಇಲ್ಲಿನ ಬಹುತೇಕ ಕುಟುಂಬಗಳು ನೀರಿಗಾಗಿ ಪರಿತಪಿಸುತ್ತಿವೆ. ಹಿಂದುಳಿದ ಕಾಲನಿಗೆ ಸಮರ್ಪಕವಾಗಿ ಚರಂಡಿ, ಸಿ.ಡಿ., ರಸ್ತೆಗಳಿಲ್ಲ. ಸ್ವಚ್ಛತೆಗಾಗಿ ಸಿಬ್ಬಂದಿ ಬರುತ್ತಿಲ್ಲ. ಹೀಗಾದರೆ, ಸಾರ್ವಜನಿಕರಿಗೆ ಏನು ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದಿನ ದೂರುಗಳಿಗೆ ಏನು ಕ್ರಮ ಕೈಗೊಂಡಿದ್ದೀರಿ ಹೇಳಿ ಎಂದು ಪಟ್ಟು ಹಿಡಿದರು. ಆದರೆ, ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದಿದ್ದಾಗ ಬೇಸತ್ತು ಮೌನಕ್ಕೆ ಶರಣಾದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಉಪಾಧ್ಯಕ್ಷರು ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ವಾರ್ಡ್​ಗೆ ಕಳುಹಿಸಿ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಚನ್ನವೀರಪ್ಪ ಶೆಟ್ಟರ್ ಹಾಗೂ ಸದಸ್ಯರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net