

ಚನ್ನರಾಯಪಟ್ಟಣ: ಇಲ್ಲಿನ ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್ ಶನಿವಾರ 2025-2026 ನೇ ಸಾಲಿಗೆ 41.59 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆ ಸಭಾಂಗಣದಲ್ಲಿ ಮಂಡನೆ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಅವಶ್ಯವಿರುವ ಹಣಕಾಸಿನ ಕ್ರೋಡೀಕರಣ ಮತ್ತು ಖರ್ಚಿನ ಕುರಿತಾಗಿ ಸುದೀರ್ಘ ಚರ್ಚೆ ನಡೆದ ನಂತರ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡಿಸಲಾಗಿದೆ. ಜತೆಗೆ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ದಿನದಿಂದ ದಿನಕ್ಕೆ ನೂತನ ಬಡಾವಣೆಗಳು ಬೆಳವಣಿಗೆ ಹೊಂದುತ್ತಿವೆ. ಎಲ್ಲ ಬಡಾವಣೆಗಳಿಗೂ ಮೂಲ ಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಮೀಸಲಿಡುವುದರ ಜತೆಗೆ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗ ನಿರ್ಮಾಣ, ಮಾರ್ಕೆಟ್ ಅಭಿವೃದ್ಧಿ ಸೇರಿದಂತೆ ಫುಟ್‌ಪಾತ್ ವ್ಯಾಪಾರಿಗಳ ತೆರವು ಸೇರಿದಂತೆ ಹತ್ತಾರೂ ಕಾರ್ಯಕ್ರಮ ಅನುಷ್ಠಾನಕ್ಕೆ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ ಎಂದರು.
ಎಸ್‌ಎಫ್‌ಸಿ, 15ನೇ ಹಣಕಾಸು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ, ಸ್ವಚ್ಛ ಭಾರತ್ ಅನುದಾನ, ಡೇ ನಲ್ಮ್ ಯೋಜನೆ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅನುದಾನ, ತೆರಿಗೆ ಮೂಲಗಳಿಂದ 18.22 ಕೋಟಿ ರೂ. ನಿರೀಕ್ಷಿಸಲಾಗಿದೆ. ಅದೇ ರೀತಿ ಕಚೇರಿ ನಿರ್ಮಾಣ ಕಾಮಗಾರಿ, ಕಚೇರಿ ಪೀಠೋಪಕರಣ, ವಾಣಿಜ್ಯ ಮಳಿಗೆ ಕಾಮಗಾರಿ, ರಸ್ತೆ, ಚರಂಡಿ ಅಭಿವೃದ್ಧಿ, ಸಂಚಾರಿ, ಬೀದಿದೀಪ ಅಳವಡಿಕೆ, ಮಳೆ ನೀರಿನ ಚರಂಡಿ, ಘನತ್ಯಾಜ್ಯ ನಿರ್ವಹಣೆ, ಕಟ್ಟಡ ಕಾಮಗಾರಿ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿ, ಸಿಬ್ಬಂದಿ ವೇತನ, ಕೌನ್ಸಿಲ್ ಸದಸ್ಯರ ಗೌರವಧನ, ಪ್ರಯಾಣ ಭತ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 12.7 ಕೋಟಿ ರೂ. ಖರ್ಚು ಅಂದಾಜಿಸಲಾ ಗಿದೆ ಎಂದರು.
ಪುರಸಭೆಯ ಸ್ವಂತ ಮೂಲಗಳಿಂದ 9.56 ಕೋಟಿ ರೂ.ಆದಾಯ ಸೇರಿದಂತೆ ಒಟ್ಟಾರೆ 39.85 ಕೋಟಿ ರೂ.ಗಳ ಆದಾಯ ನಿರೀಕ್ಷೆಯೊಂದಿಗೆ ವಿವಿಧ ಪಾವತಿಗಳಿಗಾಗಿ 40. 75 ಕೋಟಿ ರೂ. ವ್ಯಯಿಸಲಾಗುತ್ತಿದೆ. ಪುರಸಭೆಯ ಮೂಲ, ಸರ್ಕಾರದ ವಿವಿಧ ಮೂಲಗಳಿಂದ ಒಟ್ಟಾರೆಯಾಗಿ ಪುರಸಭೆಗೆ 57,39,059 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದ್ದು, ಈ ಪೈಕಿ 56.98 ಕೋಟಿ ರೂ.ಗಳ ಖರ್ಚಿನೊಂದಿಗೆ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪುರಸಭಾಧ್ಯಕ್ಷರು ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಕೆಲ ಸದಸ್ಯರ ಸಲಹೆಯಂತೆ ಪಟ್ಟಣದಲ್ಲಿನ ರಸ್ತೆ, ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಮತ್ತು ಸದಸ್ಯ ಪ್ರಕಾಶ್ ನೀಡಿದ ಸಲಹೆಯಂತೆ ಪುರಸಭಾ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಅನುದಾನ ಮೀಸಲಿಟ್ಟು ಕಾರ್ಯನ್ಮೋಖರಾಗಬೇಕು ಎಂದರು.
ವ್ಯಾಪ್ತಿಯಲ್ಲಿನ ಪಿಎಲ್‌ಡಿ ಬ್ಯಾಂಕ್ ಪಕ್ಕದ ವಾಣಿಜ್ಯ ಸಂರ್ಕೀಣ ತೆರವುಗೊಳಿಸಿ ಮಳಿಗೆ ನಿರ್ಮಣ ಮಾಡುವ ಮೂಲಕ ಪುರಸಭೆಗೆ ಆದಾಯ ಹೆಚ್ಚಿಸಿಕೊಳ್ಳಲು ಹಣ ಮೀಸಲಿಡಬೇಕು. ಮಾರುಕಟ್ಟೆಯೊಳಗೆ ನಿರ್ಮಾಣ ಮಾಡಲಾಗಿರುವ ಪ್ರಾಂಗಣವನ್ನು ಹರಾಜು ನಡೆಸಿ ಆದಾಯ ತರುವ ಕೆಲಸವಾಗಬೇಕು ಎಂದು ಪ್ರಕಾಶ್ ಹೇಳಿದರು.
ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭೆ ಉಪಾಧ್ಯಕ್ಷೆ ರಾಣಿಕೃಷ್ಣ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.
.