

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಅರ್ಧ ಮೊತ್ತ ಭರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆ. 23ರಿಂದ 31ರವರೆಗೆ ಹುಬ್ಬಳ್ಳಿ- ಧಾರವಾಡ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ 40,34,450 ರೂ. ದಂಡ ವಸೂಲಾತಿಯಾಗಿದೆ.
ಅವಳಿನಗರದ ಪ್ರಮುಖ ವೃತ್ತಗಳು, ಮಾರ್ಗಗಳಲ್ಲಿ ಸಂಚಾರ ಠಾಣೆಗಳಿಂದ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಬಳಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಇ- ಚಲನ್ ಸೃಷ್ಟಿಸಲಾಗಿದೆ. ಪ್ರಮುಖವಾಗಿ ದ್ವಿಚಕ್ರ ವಾಹನಗಳ ಮಾಲೀಕರು ಹೆಲ್ಮೆಟ್ ಧರಿಸದಿರುವುದು, ಮೂವರ ಪ್ರಯಾಣ, ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ನೋ ಪಾರ್ಕಿಂಗ್, ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು ಸೇರಿ ಕ್ಯಾಮರಾಗಳ ಮೂಲಕ ಇ- ಚಲನ್ ಸೃಷ್ಟಿಸಲಾಗಿದೆ.
ದಂಡದ ಅರ್ಧ ಮೊತ್ತ ಪಾವತಿಸುವಂತೆ ಸಂಚಾರಿ ಠಾಣೆಗಳ ಅಽಕರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಣಾಮ ವಾಹನ ಸವಾರರು ಠಾಣೆಗಳು ಮತ್ತು ಕರ್ತವ್ಯನಿರತ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ದಂಡದ ಅರ್ಧ ಮೊತ್ತ ಪಾವತಿಸುತ್ತಿದ್ದಾರೆ. ದಂಡದ ಅರ್ಧ ಮೊತ್ತ ಪಾವತಿಸಲು ಸೆ. 12ರವರೆಗೆ ಅವಕಾಶವಿದ್ದು, ಪೊಲೀಸರನ್ನು ಸಂಪರ್ಕಿಸಿ ದಂಡ ಪಾವತಿಸಬೇಕು ಎಂದು ಸಂಚಾರ ಠಾಣೆ ಅಧಿಕಾರಿಗಳು ವಿನಂತಿಸಿದ್ದಾರೆ.
* 45 ಕೇಸ್, 12,250 ರೂ. ದಂಡ:
ನಗರದ ಅಜಯ ಕಲಾಲ್ ಎಂಬುವರ ದ್ವಿಚಕ್ರ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘಿಸಿದ 45 ಪ್ರಕರಣಗಳು ದಾಖಲಾಗಿದ್ದವು. ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ವಿಠ್ಠಲ ಮಾಯಣ್ಣವರ ಹಾಗೂ ಮಂಜುನಾಥ ಹಟ್ಟಿಮನಿ ಅವರು ಬೈಕ್ ಸವಾರನಿಗೆ ಮಾಹಿತಿ ನೀಡಿ ಅವರಿಂದ 45 ಪ್ರಕರಣಗಳ 12,250 ರೂ. ದಂಡ ಭರಿಸಿಕೊಂಡರು.