ಎಸ್ಸಿ, ಎಸ್‌ಟಿ ಕಾಲನಿ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ

snd 29-1
ಸಿಂದಗಿ ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಭವಾನಿ ಪಾಟೀಲ, ಭೀಮನಗೌಡ ಬಿರಾದಾರ, ರಾಜಶೇಖರ ಚೌರ ಮತ್ತಿತರರಿದ್ದರು.
Published on

ಸಿಂದಗಿ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಡಿ ಕ್ಷೇತ್ರದಲ್ಲಿನ ಮೆಟ್ರಿಕ್ ಪೂರ್ವ ಹಾಗೂ ಬಾಲಕರ ಮತ್ತು ಬಾಲಕಿಯರ ವಸತಿ ಶಾಲೆ ಮತ್ತು ನಿಲಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ. ಅನುದಾನ ಮಂಜೂರಿ ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ 3.99 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಸರ್ಕಾರ ಮೂರು ದಶಕಕ್ಕೂ ಹೆಚ್ಚಿನ ಹಳೆಯ ಎರಡು ಸರ್ಕಾರಿ ವಸತಿ ನಿಲಯಗಳನ್ನು ಆಧುನಿಕರಣಕ್ಕೆ 14 ಕೋಟಿ ರೂ., ಹಿಕ್ಕನಗುತ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ 16 ಕೋಟಿ ರೂ., ಪಟ್ಟಣದ ಅಲ್ಪಸಂಖ್ಯಾತರ ವಸತಿ ನಿಲಯ ಮತ್ತು ಆಲಮೇಲದ ಮುರಾರ್ಜಿ ವಸತಿ ಶಾಲೆ ಕಟ್ಟಡಕ್ಕೆ ತಲಾ 5 ಕೋಟಿ ರೂ. ಹಾಗೂ ಅಲ್ಲಿನ ವಸತಿ ನಿಲಯಕ್ಕೆ 6 ಕೋಟಿ ರೂ., ತಾಂಬಾ ವಸತಿ ನಿಲಯ ಕಟ್ಟಡಕ್ಕೆ 3 ಕೋಟಿ ರೂ. ಬಳಗಾನೂರ ವಸತಿ ನಿಲಯಕ್ಕೆ 40 ಲಕ್ಷ ರೂ. ಅನುದಾನದ ಮಂಜೂರಾತಿ ನೀಡಿದೆ. ಅಲ್ಲದೆ, ನಮ್ಮ ಕ್ಷೇತ್ರದಲ್ಲಿನ ಎಸ್ಸಿ ಮತ್ತು ಎಸ್ಟಿ ಕಾಲನಿಗಳ ಅಭಿವೃದ್ಧಿಗೆ 4 ಕೋಟಿಗಳ ವಿಶೇಷ ಅನುದಾನ ಮಂಜೂರಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ನಮ್ಮ ಕ್ಷೇತ್ರದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಕಡತಗಳಿಗೆ ತಕ್ಷಣವೇ ತಮ್ಮ ರುಜು ಹಾಕಿ ಬೆನ್ನು ತಟ್ಟಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ರವಿರಾಜ ದೇವರಮನಿ, ಭೀಮನಗೌಡ ಬಿರಾದಾರ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1 ಸಹಾಯಕಿ ನಿರ್ದೇಶಕಿ ಭವಾನಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net