

ಹಾನಗಲ್ಲ: ಗ್ರಾಮ ಪಂಚಾಯಿತಿಗಳ ಕರ ವಸೂಲಾತಿ ಮಾಸಾಚರಣೆ ಅಂಗವಾಗಿ ತಾಲೂಕು ಪಂಚಾಯಿತಿ ಆಡಳಿತವು ಪೂರ್ಣ ಪ್ರಮಾಣದ ತೆರಿಗೆ ಪಾವತಿಸಿದ ಗ್ರಾಮಸ್ಥರಿಗೆ ಹೂಗುಚ್ಛ ಹಾಗೂ ಉಡುಗೊರೆ ನೀಡಿ ಸನ್ಮಾನಿಸುತ್ತಿದೆ. ಇದುವರೆಗೆ ತಾಲೂಕಿನಲ್ಲಿ 4.18 ಕೋಟಿ ರೂ. ತೆರಿಗೆ ಬಾಕಿ ವಸೂಲಿ ಮಾಡಿದೆ.
ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 16 ಕೋಟಿ ರೂ.ಗಳಷ್ಟು ತೆರಿಗೆ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಅವರ ಮಾರ್ಗದರ್ಶನದಲ್ಲಿ ಬಾಕಿ ವಸೂಲಾತಿಗಾಗಿ ವಿಶೇಷ ಕ್ರಮ ಕೈಗೊಂಡಿರುವ ಗ್ರಾಪಂ ಸಿಬ್ಬಂದಿ, ಮಾರ್ಚ್ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಬಾಕಿ ವಸೂಲಾತಿ ಗುರಿ ಹೊಂದಿದೆ.
ಈ ಕುರಿತು ತಾಪಂ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಪ್ರತಿದಿನ ಗ್ರಾಪಂ ಸಿಬ್ಬಂದಿ ಬೆಳಗ್ಗೆ ಹಾಗೂ ಸಂಜೆ ಕರ ವಸೂಲಿಗಾಗಿ ಮನೆ-ಮನೆಗೆ ತೆರಳಿ ಗ್ರಾಮಸ್ಥರನ್ನು ಭೇಟಿ ಮಾಡಿ ಗ್ರಾಮಾಭಿವೃದ್ಧಿ ಕೆಲಸ-ಕಾರ್ಯಗಳಿಗಾಗಿ ಕರ ವಸೂಲಿ ಅಗತ್ಯವಾಗಿದ್ದು, ಕರ ಬಾಕಿ ಮುಕ್ತ ಗ್ರಾಮವಾಗಲು ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ. ಇವರೊಂದಿಗೆ ತಾಪಂ ಇಒ ಪರಶುರಾಮ ಪೂಜಾರ ಕೂಡ ಗ್ರಾಮಗಳಿಗೆ ಭೇಟಿ ನೀಡಿ ಕರ ವಸೂಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹಲವು ಪಂಚಾಯಿತಿಗಳಲ್ಲಿ ದಿನಕ್ಕೆ 10 ಲಕ್ಷ ರೂ.ಗಳಷ್ಟು ಕರ ವಸೂಲಿಯಾಗುತ್ತಿದೆ. ತಾಲೂಕಿನ ಬೈಚವಳ್ಳಿ, ಉಪ್ಪುಣಸಿ, ಆಡೂರು, ಕರಗುದರಿ, ಕೊಪ್ಪರಸಿಕೊಪ್ಪ, ಸುರಳೇಶ್ವರ, ಕೂಸನೂರು, ಮಲಗುಂದ, ಹೇರೂರು, ಶಿರಗೋಡ, ಸೋಮಸಾಗರ ಹಾಗೂ ಗೆಜ್ಜಿಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿ ನೌಕರರಿಲ್ಲ. ಆದರೂ, ಈ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ಒಟ್ಟಾಗಿ ಕರವಸೂಲಿಗೆ ಮುಂದಾಗಿದ್ದಾರೆ. ಉಪ್ಪುಣಸಿ ಹಾಗೂ ಬೈಚವಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳೀಯ ಮಹಿಳಾ ಸಂಘಟನೆಗಳಿಗೆ ಕರಾಕರಣೆ ಮತ್ತು ವಸೂಲಿ ಜವಾಬ್ದಾರಿ ವಹಿಸಲಾಗಿದ್ದು, ಅವರಿಗೆ ವಸೂಲಾದ ತೆರಿಗೆ ಹಣದಲ್ಲಿ ಶೇ.5ರಷ್ಟನ್ನು ನೀಡಲಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ.
ಗ್ರಾಮಗಳಲ್ಲಿ ಡಂಗುರ ಸಾರಿ, ಮನೆ-ಮನೆಗೆ ತೆರಳಿ ಕರ ನೀಡುವಂತೆ ಮನವಿ ಮಾಡಿದ್ದರ ಪರಿಣಾಮವಾಗಿ ವಸೂಲಾತಿಯಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಗ್ರಾಮಸ್ಥರಿಗೆ ಕರೆ ಮಾಡಿ ಅವರ ತೆರಿಗೆ ಬಾಕಿ ವಿವರ ನೀಡುವುದು. ಕರ ನೀಡುವಂತೆ ಕರಪತ್ರ ಹಂಚುವುದು, ಅಲಂಕೃತ ಚಕ್ಕಡಿ, ಎತ್ತುಗಳೊಂದಿಗೆ ಗ್ರಾಮಗಳಲ್ಲಿ ಮೆರವಣಿಗೆ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಪೂರ್ಣ ಪ್ರಮಾಣದ ತೆರಿಗೆ ಪಾವತಿಸಿದ ಕುಟುಂಬಗಳವರನ್ನು ಗೌರವಿಸಿ ತಕ್ಷಣ ವಿವಿಧ ಪ್ರೋತ್ಸಾಹಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಮಾರ್ಚ್ ಹೊತ್ತಿಗೆ ತಾಲೂಕಿನಲ್ಲಿ ಪೂರ್ಣ ತೆರಿಗೆ ವಸೂಲಿಗೆ ಕ್ರಮ ಜರುಗಿಸಲಾಗಿದೆ.
ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳು ಪೂರ್ಣ ಪ್ರಮಾಣದಲ್ಲಿ ಕರ ವಸೂಲಿಗೆ ಕ್ರಮ ಕೈಗೊಂಡಿರುವುದಲ್ಲದೆ, ಪ್ರಸಕ್ತ ಆರ್ಥಿಕ ವರ್ಷಕ್ಕೆ ತೆರಿಗೆ ಬಾಕಿ ಮುಕ್ತ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಶಪಥ ಮಾಡಿದಂತಿದೆ. ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಇಚ್ಛಾಶಕ್ತಿಯಿಂದಾಗಿ ರಾಜ್ಯದಲ್ಲಿ ಮಾದರಿ ತಾಲೂಕು ಆಗುವ ಲಕ್ಷಣಗಳು ಕಂಡು ಬಂದಿವೆ.
ನಮ್ಮ ಆಸ್ತಿಗಳ ಕರ ನಾವು ಕಟ್ಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂಬ ಅರಿವು ಮೂಡಿಸಿದ್ದರಿಂದ ವಸೂಲಾತಿ ಸಾಧ್ಯವಾಗಿದೆ. ಮಾರ್ಚ್ ಕೊನೆಯೊಳಗಾಗಿ ಬಾಕಿಯಿರುವ 16 ಕೋಟಿ ರೂ. ತೆರಿಗೆ ವಸೂಲಾಗುವ ಪೂರ್ಣ ಭರವಸೆಯಿದೆ. ಸಿಬ್ಬಂದಿಗಳೆಲ್ಲರೂ ಹಗಲಿರುಳೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. | ಪರಶುರಾಮ ಪೂಜಾರ, ಇಒ ಹಾನಗಲ್ಲ