ಗಣಿ ಭಾದಿತ ಪ್ರದೇಶಾವೃದ್ಧಿಗೆ 3,792.30 ಕೋಟಿ ರೂ.ಯೋಜನೆ

ctd-bijjur
Published on

ಚಿತ್ರದುರ್ಗ: ಕೆಎಂಇಆರ್‌ಸಿ ನಿಧಿಯಡಿ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ದುರ್ಬಲ ವರ್ಗದವರ ಏಳಿಗೆಗೆ ಒತ್ತು ನೀಡುವಂಥ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಆರ್‌ಇಸಿ)ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಎಸ್. ಬಿಜ್ಜೂರ್ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಗಣಿಭಾದಿತ ವಲಯಗಳ ಸಮಗ್ರ ಪರಿಸರ ಯೋಜನೆ(ಸಿಇಪಿಎಂಐಝೆಡ್)ಅಡಿ ಕೈಗೊಳ್ಳುತ್ತಿರುವ ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿ, ಗಣಿಬಾಧಿತ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕೆಎಂಇಆರ್‌ಸಿ ಮುಖ್ಯಉದ್ದೇಶ ಎಂದು ತಿಳಿಸಿದರು.

ಯೋಜನೆಗಳ ವರದಿಯನ್ನು ಕಾಲ, ಕಾಲಕ್ಕೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರಗಳ ಅನುದಾನದಲ್ಲಿ ಯೋಜನೆ ರೂಪಿಸುವಂತೆ ಕೆಎಂಇಆರ್‌ಸಿ ಯೋಜನೆಗಳನ್ನು ರೂಪಿಸಲಾಗದು. ಆದ್ದರಿಂದ ಗಣಿಭಾದಿತ ಪ್ರದೇಶ ವ್ಯಾಪ್ತಿ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ನಿರ್ದಿಷ್ಟ ಮಾನದಂಡಗಳನ್ನಾಧರಿಸಿ ಡಿಪಿಆರ್ ಸಿದ್ದಪಡಿಸಬೇಕು ಎಂದು ಬಿಜ್ಜೂರ್ ಹೇಳಿದರು.

ಕೆಎಂಇಆರ್‌ಸಿ ಅಡಿ ಆರಂಭದಲ್ಲೇ ಪೂರ್ಣ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ಕಾಮಗಾರಿಗಳ ಪ್ರಗತಿಗೆ ಆರ್ಥಿಕ ತೊಂದರೆ ಎದುರಾಗದು. ಕಾಲಮಿತಿಯಲ್ಲಿ ಪೂರ್ಣಗೊಳಿಸಬಹುದು ಎಂದರು.

ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳ ಗಣಿಭಾದಿತ ಪ್ರದೇಶಗಳಲ್ಲಿ 3,792.30 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈಗಾಗಲೇ ಅನುಮೋದನೆ ಪಡೆದು ಆರಂಭಿಸಿದ ಕಾಮಗಾರಿಗಳ ವಿವರ ಪ್ರತಿ ವರ್ಷ ಸಲ್ಲಿಸಬೇಕು. ಅನುಮೋದನೆ ಪಡೆಯದ ಯೋಜನೆಗಳಿಗೆ ಕೂಡಲೇ ಅನುಮೋದನೆ ಪಡೆಯಬೇಕು.

ಚಳ್ಳಕೆರೆ ಕುದಾಪುರ ಭಾರತೀಯ ವಿಜ್ಞಾನ ಕೇಂದ್ರ(ಐಐಎಸ್‌ಸಿ)ಆವರಣದಲ್ಲಿ ಸೈನ್ಸ್‌ಪಾರ್ಕ್ ನಿರ್ಮಿಸಿದರೆ ನಿರ್ವಹಣೆಗೆ ಉತ್ತಮ ವಾಗುತ್ತದೆ. ಗಣಿಬಾಧಿತ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತಿದ್ದು, ಫಲಾನುಭವಿಗಳ ಪಟ್ಟಿಯನ್ನು ತಕ್ಷಣ ಕಳುಹಿಸುವಂತೆ ಡಿಸಿ ಟಿ. ವೆಂಕಟೇಶ್ ಅವರಿಗೆ ಸೂಚಿಸಿದರು. ಇಲಾಖೆ ಹಾಸ್ಟೆಲ್‌ಗಳ ನಿರ್ಮಾಣದ ಯೋಜನೆ ರೂಪಿಸುವ ಮುನ್ನ ಸಾಧಕ ಬಾಧಕ ಪರಿಶೀಲಿಸಬೇಕೆಂದರು.

ಗಣಿಬಾಧಿತ ಪ್ರದೇಶಗಳಲ್ಲಿ ಜಲಜೀವನ್‌ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಬಿಟ್ಟು ಹೋದ ಕಾಮಗಾರಿಗಳ ವಿವರ ಪಡೆದು ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸುವುದಾಗಿ ಡಿಸಿ ತಿಳಿಸಿದರು.

ಜಿಪಂ ಸಿಇಒ ಡಾ.ಎಸ್. ಆಕಾಶ್, ಮುಖ್ಯಯೋಜನಾಧಿಕಾರಿ ಗಾಯತ್ರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಾ. ಮಹೇಶ್ ಇತರರು ಇದ್ದರು.

..ಕೋಟ್...

ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಹೊಸ ಯೋಜನೆಗಳನ್ನು ರೂಪಿಸಿ ಕೆಎಂಆರ್‌ಇಸಿಗೆ ಸಲ್ಲಿಸಲಾಗುವುದು.

ಡಾ.ಎಸ್.ಆಕಾಶ್, ಸಿಇಒ, ಜಿಪಂ.

----

ಇಲಾಖೆ,ವೆಚ್ಚ(ಕೋಟಿ ರೂ.)

ಅರಣ್ಯ -540.83

ಮಾಲಿನ್ಯ ನಿಯಂತ್ರಣ ಮಂಡಳಿ 14.81

ಕೃಷಿ-324.85

ಪಶುವೈದ್ಯಕೀಯ ಸೇವೆ-38

ರೇಷ್ಮೆ-3.5

ತೋಟಗಾರಿಕೆ-17.06

ಮೀನುಗಾರಿಕೆ-7.62

ನಗರ ನೀರು ಮತ್ತು ಒಳಚಂರಡಿ ಮಂಡಳಿ-165

ಗ್ರಾಮೀಣ ನೀರು ಮತ್ತು ನೈರ್ಮಲ್ಯ-533

ಪಂ.ರಾಜ್ ಇಂಜಿಯರಿಗ್-280.68

ಆರೋಗ್ಯ-114

ವೈದ್ಯಕೀಯ ಶಿಕ್ಷಣ-114 (ನೂತನ ಆಸ್ಪತ್ರೆ ನಿರ್ಮಾಣ)

ಸಾರ್ವಜನಿಕ ಶಿಕ್ಷಣ -255.94

ಪಿಯು -50

ಮಹಿಳಾ ಮತ್ತು ಮಕ್ಕಳ ಕಲ್ಯಾಣ 94.03

ಸಮಾಜ ಕಲ್ಯಾಣ-50 ಕೋಟಿ

ಬಿಸಿಎಂ-25.31

ಅಲ್ಪಸಂಖ್ಯಾತರ ಕಲ್ಯಾಣ-19.2

ಗ್ರಾಮೀಣ ವಸತಿ-106.89

ಪ್ರವಾಸೋದ್ಯಮ-34.5

ಸಣ್ಣ ನಿರಾವರಿ ಇಲಾಖೆ 154.7

ಸೈನ್ಸ್‌ಪಾರ್ಕ್‌ಗೆ -15

ಎನ್‌ಸಿಸಿ ಬಿಲ್ಡಿಂಗ್-1

ಸಾರ್ವಜನಿಕ ಗ್ರಂಥಾಲಯ-10.29

ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ-25

ಯುವ ಜನ ಸೇವಾ ಮತ್ತು ಕ್ರೀಡೆ-50

ಗಣಿ ಮತ್ತು ಭೂವಿಜ್ಞಾನ-3

ಕಂದಾಯ-1

ಕೌಶಲಾಭಿವೃದ್ಧಿ-70.79

ಲೋಕೋಪಯೋಗಿ 620.22

---------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net