ಟನ್ ಕಬ್ಬಿಗೆ 3,500 ರೂ. ನಿಗದಿಯಾಗಲಿ

03M.D.R.4
ಮದ್ದೂರಿನ ಪ್ರವಾಸಿ ಮಂದಿರದ ಬಳಿ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೋರಾಪುರದ ಶಂಕರೇಗೌಡ, ವಿನೋದ್‌ಬಾಬು, ಲಿಂಗಪ್ಪಾಜಿ, ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್, ರವಿಕುಮಾರ್ ಇದ್ದರು.
Published on

ಮದ್ದೂರು: ಕಬ್ಬಿಗೆ ಉತ್ತಮ ಬೆಲೆ ನಿಗದಿಗೊಳಿಸುವಂತೆ ಒತ್ತಾಯಿಸಿ ಬೆಳಗಾವಿನಲ್ಲಿ ರೈತರು ನಡೆಸುತ್ತಿರುವ ನಿರಂತರ ಧರಣಿಗೆ ಜಿಲ್ಲಾ ರೈತ ಸಂಘಟನೆ ಬೆಂಬಲ ವ್ಯಕ್ತಪಡಿಸಿ ರೈತ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಟನ್ ಕಬ್ಬಿಗೆ ಮೂರೂವರೆ ಸಾವಿರ ನಿಗದಿಗೊಳಿಸುವಂತೆ ಆಗ್ರಹಿಸಿದರು.

ಈಗಾಗಲೇ ಕಬ್ಬು ಬೆಳೆಗಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ರಸಗೊಬ್ಬರಗಳ ಬೆಲೆ ಮಿತಿಮೀರಿರುವುದರ ಜತೆಗೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಸಾಗಣೆ ವೆಚ್ಚ, ಕೂಲಿ ಇತರ ಸಮಸ್ಯೆಗಳನ್ನು ದಿನ ನಿತ್ಯ ಎದುರಿಸುವಂತಾಗಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಸೋಮನಹಳ್ಳಿಯ ಕಾರ್ಖಾನೆಯೊಂದರಲ್ಲಿ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. ಕೂಡಲೇ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಕಂಪನಿ ಮತ್ತು ಮಾಲೀಕರ ವಿರುದ್ಧ ನಿರ್ದಾಕ್ಷಿಣ ಕ್ರಮ ಜರುಗಿಸುವುದರ ಜತೆಗೆ ಕೂಡಲೇ ಪರವಾನಗಿ ರದ್ದು ಮಾಡುವಂತೆ ಕೋರಿದರಲ್ಲದೆ, ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಅಶೋಕ್ ಹಾಗೂ ಸಹಾಯಕ ನಿರ್ದೇಶಕಿ ಪ್ರತಿಭಾ, ಕಳಪೆ ರಸಗೊಬ್ಬರ ಪೂರೈಕೆ ಮಾಡುತ್ತಿರುವ ಕಂಪನಿ ವಿರುದ್ಧ ನಿರ್ದಾಕ್ಷಿಣ ಕ್ರಮ ಜರುಗಿಸಲಾಗುವುದು. ಗೋದಾಮುವಿನಲ್ಲಿ ಸಿಕ್ಕ ಗೊಬ್ಬರವನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು ವರದಿ ಬಂದ ಬಳಿಕ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.\

ಐಪಿಎಲ್ ಮತ್ತು ಕಾರ್ಖಾನೆ ಮಾಲೀಕರೊಂದಿಗೆ ಒಪ್ಪಂದವಾಗಿದೆಯೇ ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಜಿಲ್ಲೆ ಹಾಗೂ ತಾಲೂಕಿನಲ್ಲಿ ಅಕ್ರಮ ರಸಗೊಬ್ಬರ ಪೂರೈಕೆಯಾಗದಂತೆ ಇಲಾಖಾ ಅಧಿಕಾರಿಗಳು ಮತ್ತು ಜಾಗೃತದಳ ಹದ್ದಿನ ಕಣ್ಣಿಟ್ಟಿದೆ. ವರದಿ ಬಂದ ಬಳಿಕ ಆರೋಪ ಸಾಬೀತಾದರೆ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲು ಮಾಡುವುದಾಗಿ ರೈತರಿಗೆ ತಿಳಿಸಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ತಾಲೂಕು ಅಧ್ಯಕ್ಷ ವಿನೋದ್‌ಬಾಬು, ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್, ರವಿಕುಮಾರ್, ಸತೀಶ್, ರಾಮಲಿಂಗು, ಮಹದೇವು, ವೆಂಕಟೇಶ್, ಜಯರಾಮು, ರವಿ, ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net