

ಮುಧೋಳ: ನಗರದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 91 ಅರ್ಜಿಗಳು ಸ್ವೀಕೃತಗೊಂಡಿದ್ದು, 30 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದ ರನ್ನ ಭವನದಲ್ಲಿ ಸೋಮವಾರ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತ ನೀಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಇಲ್ಲಿಯವರೆಗೆ ಮುಧೋಳ ಕ್ಷೇತ್ರಕ್ಕೆ 348.64 ಕೋಟಿ ರೂ. ನೀಡಲಾಗಿದೆ ಎಂದರು.
ಜಿಎಲ್‌ಬಿಸಿ, ಜಿಆರ್‌ಬಿಸಿ, ಸಣ್ಣ ನೀರಾವರಿ, ಆಹಾರ ನಾಗರಿಕ ಇಲಾಖೆ, ಹೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅರ್ಜಿಗಳಿಗೆ ಸಚಿವರು ಸ್ಥಳದಲ್ಲೇ ಸ್ಪಂದಿಸಿದರು. ಜತೆಗೆ ಹತ್ತು ಜನ ಮಹಿಳೆಯರಿಗೆ ವಿಧವಾ ವೇತನ ಆದೇಶ ಪತ್ರ ವಿತರಿಸಲಾಯಿತು. ಇನ್ನುಳಿದ 61 ಅರ್ಜಿಗಳ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳ ಮಟ್ಟದ ಸಮಿತಿ ಮತ್ತು ನಗರಸಭೆ ಸಮಿತಿಗಳಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬರುವುದನ್ನು ತಪ್ಪಿಸಬೇಕು. ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಘಟಪ್ರಭಾ ನದಿ ಹಾಗೂ ಕಾಲುವೆಗಳ ಮೂಲಕ ರೈತರಿಗೆ ನೀರು ಒದಗಿಸುವ 120 ಕೋಟಿ ರೂ. ಯೋಜನೆಯಲ್ಲಿ ಈಗಾಗಲೇ 60 ಕೋಟಿ ರೂ. ಮಂಜೂರಾಗಿದೆ. ಕಾಡರಕೊಪ್ಪ ಏತ ನೀರಾವರಿ ಯೋಜನೆಯ ಮೂಲಕ 8 ಹಳ್ಳಿಗಳ ಸುಮಾರು 6 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ರೈತರಿಗೆ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ 400 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ. ಹೆಸ್ಕಾಂ ಕಚೇರಿಯಲ್ಲಿ 70 ಟಿಸಿಗಳಿವೆ. ವಿದ್ಯುತ್ ಕೊರತೆಯ ಬಗ್ಗೆ ರೈತರು ಚಿಂತಿಸಬೇಕಾಗಿಲ್ಲ. ಜತೆಗೆ ನಗರಕ್ಕೆ ದಿನದ 24 ಗಂಟೆ ನೀರು ಪೂರೈಸುವ 177 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಕರೆಯಲಾಗಿದ್ದು , ಶೀಘ್ರದಲ್ಲೇ ಪೂಜಾ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.
ಒಂಟಗೋಡಿ, ಚಿತ್ರಬಾನುಕೋಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಗ್ರಾಮೀಣ ಭಾಗದ ಶಿಥಿಲಗೊಂಡಿರುವ ಶಾಲೆಗಳ ದುರಸ್ತಿಗೆ ನರೇಗಾ ಯೋಜನೆಯಡಿ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಜಿಲ್ಲಾಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಎಸ್. ರೋಶನ್ ಜಮೀರ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಹಾಂತೇಶ ಮಾಚಕನೂರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ತಹಸೀಲ್ದಾರ್ ಮಹದೇವ ಸನಮುರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಸಿದ್ದನಾಳ, ನಗರಸಭೆ ಪೌರಾಯುಕ್ತ ಗೋಪಾಲ್ ಕಾಸೆ ಮತ್ತಿತರರಿದ್ದರು.