

ಅಣ್ಣಿಗೇರಿ: ಪರಿಶಿಷ್ಟ ಜನಾಂಗ, ಹಿಂದುಳಿದ, ಬಡವರು, ಅಂಗವಿಕಲರು, ಮಹಿಳೆಯರ ಕಲ್ಯಾಣಕ್ಕಾಗಿ 33.50 ಲಕ್ಷ ಕ್ರಿಯಾ ಯೋಜನೆ ಸಿದ್ಧಪಡಿಸಿ, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅನುದಾನ ಬಳಸಲಾಗುವುದು ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ. ಶಾಲಂ ಹುಸೇನ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ 2025-26ನೇ ಸಾಲಿನ ಆಯವ್ಯಯ ಮಂಡಿಸಿ ಮಾತನಾಡಿದ ಅವರು, ಸ್ಥಳೀಯ ನಾಗರಿಕರ ಸಮಸ್ಯೆಗಳು ಸ್ಥಳೀಯ ಹಂತದಲ್ಲಿಯೇ ಪರಿಹಾರ ಒದಗಿಸಲು ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಯಾವುದೇ ಸಂಸ್ಥೆಯಾಗಲಿ ಹಣಕಾಸು ಆಯಾ ಸಂಸ್ಥೆಯ ಜೀವನಾಡಿ. ಸಂಸ್ಥೆಯ ಯಶಸ್ವಿ ಕಾರ್ಯ ನಿರ್ವಹಣೆಗೆ ಹಣಕಾಸಿನ ಸೂಕ್ತ ನಿರ್ವಹಣೆ ಅವಶ್ಯವಾಗಿದೆ. ಆದ್ದರಿಂದ ಸ್ಥಳೀಯ ಪುರಸಭೆ ವಿವಿಧ ಅಭಿವೃದ್ಧಿ ಕಾರ್ಯ ನೆರವೇರಿಸಿಕೊಂಡು ಹೋಗಲು ಹಣಕಾಸಿನ ಸೂಕ್ತ ಹಾಗೂ ಸಮರ್ಥ ನಿರ್ವಹಣೆಗೆ ಆಯವ್ಯಯ ಮಂಡಿಸಲಾಗುತ್ತಿದೆ ಎಂದರು.
ಪುರಸಭೆ ಆರಂಭಿಕ ಶಿಲ್ಕು 11.24 ಕೋಟಿ ರೂಪಾಯಿ ಇದೆ. ಒಟ್ಟು ಸ್ವೀಕೃತಿ 21.53 ಕೋಟಿ ರೂ., 21.47 ಕೋಟಿ ರೂ. ವೆಚ್ಚ ಮಾಡಲಿದ್ದು, 6.40 ಲಕ್ಷ ರೂಪಾಯಿ ಉಳಿತಾಯ ಆಗಲಿದೆ ಎಂದು ಆಡಳಿತಾಧಿಕಾರಿ ತಿಳಿಸಿದರು.
ಜಾಹೀರಾತು ತೆರಿಗೆ, ಎರೆಹುಳು ಗೊಬ್ಬರ ಮಾರಾಟ, ನೀರು ಬಳಕೆ ಶುಲ್ಕ 98 ಲಕ್ಷ ರೂ., ಹೊಸ ಸಂಪರ್ಕದಿಂದ 2.60 ಲಕ್ಷ ರೂ., ಆಸ್ತಿ ತೆರಿಗೆ ವಸೂಲಾತಿ 81 ಲಕ್ಷ ರೂ., ಕಟ್ಟಡ ಪರವಾನಗಿ 5.33 ಲಕ್ಷ ರೂ., ಅಭಿವೃದ್ಧಿ ಶುಲ್ಕ 11 ಲಕ್ಷ ರೂ., ವಾಣಿಜ್ಯ ಮಳಿಗೆಗಳಿಂದ ಬಾಡಿಗೆಯಾಗಿ 8.91 ಲಕ್ಷ ರೂ., ಸಂತೆ ಮಾರುಕಟ್ಟೆ ಶುಲ್ಕದಿಂದ 2.88 ಲಕ್ಷ ರೂ., ಮುಂತಾದ ಮೂಲಗಳಿಂದ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ರೈಮಾನಸಾಬ್ ಹೊರಗಿನಮನಿ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಸದಸ್ಯರಾದ ಎ.ಪಿ. ಗುರಿಕಾರ, ಬಸವಣ್ಣೆವ್ವ ದಿಡ್ಡಿ, ಜಯಲಕ್ಷ್ಮೀ ಜಕರಡ್ಡಿ, ಶೋಭಾ ಗೊಲ್ಲರ, ಸದಸ್ಯರು ಉಪಸ್ಥಿತರಿದ್ದರು.