

ಹುಣಸೂರು: ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಜಿ.ಡಿ. ಹರೀಶ್‌ಗೌಡ ಆದ್ಯತೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದಾರೆ.
ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಶಾಸಕರು ವಿವಿಧ ಇಲಾಖೆಗಳ ಮೂಲಕ ತಾಲೂಕಿಗೆ 311.67 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಇದಲ್ಲದೆ ತಾಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ 38 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿ ದೊರೆಯಲಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗಾಗಿ 40 ಕೋಟಿ ರೂ. ಅನುದಾನ ಮಂಜೂರಾಗಿದೆ. ಅನುದಾನದಲ್ಲಿ ನಲ್ಲೂರು ಪಾಲದಿಂದ ಮೂರ್ಕಲ್ ರಸ್ತೆ, ಹುಣಸೂರು ಪಿರಿಯಾಟ್ಟಣ ರಸ್ತೆ, ಬಿಳಿಕೆರೆಯಿಂದ ಕರಿಮುದ್ದನಹಳ್ಳಿ ರಸ್ತೆ, ರಂಗನಾಥ ಬಡಾವಣೆಯಿಂದ ಮೋದೂರು ಮಾರ್ಗದ ರಸ್ತೆ, ಹನಗೋಡಿನಿಂದ ಕೋಣನ ಹೋಸಹಳ್ಳಿ ರಸ್ತೆ, ಹುಣಸೂರು ಕೆ.ಆರ್. ನಗರ ರಸ್ತೆ, ಬೋಳನಹಳ್ಳಿ ತೆಂಕಲಕೊಪ್ಪಲು ರಸ್ತೆ, ಹಳ್ಳದಕೊಪ್ಪಲಿನಿಂದ ಜಿ.ವಿ.ಗುಡಿ ರಸ್ತೆ, ಹುಣಸೂರು ಹನಗೋಡು ಪಿರಿಯಾಪಟ್ಟಣ ರಸ್ತೆ ಹಾಗೂ ಕೆ.ಎಂ.ವಾಡಿಯಿಂದ ಮರೂರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳ ಅಭಿವೃದ್ಧಿಗಾಗಿ 146 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಹಾರಂಗಿ ಜಲಾನಯನ ವ್ಯಾಪ್ತಿಯ ಹೈರಿಗೆ ನಾಲಾ ರಸ್ತೆ ಅಭಿವೃದ್ಧಿ, ಹಿಂಡುಗೂಡ್ಲು ರಸ್ತೆ ಅಭಿವೃದ್ಧಿ, ಉಯಿಗೊಂಡನಹಳ್ಳಿ ಸೇರಿದಂತೆ ಮೂರು ಕೆರೆಗಳಿಗೆ ನೀರು ತುಂಬಿಸುವುದು, ಹೊಸಪುರ ಟ್ಯಾಂಕ್ ಅಭಿವೃದ್ಧಿ, ಮರೂರು ಬ್ರಾಂಚ್ ಕಾಲುವೆ ಲೈನಿಂಗ್ ಮತ್ತು ಸಿಡಿ ಕಾಮಗಾರಿ ಹಾಗೂ ಕೆ.ಎಂ.ವಾಡಿ ಚಾನಲ್, ವಡಿಕೆಕಟ್ಟೆ ಚಾಬಲ್ ಸಿಡಿ ಕಾಮಗಾರಿಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಗೆ 13.85 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ಶಿರೂರು ನಾಲೆ ಅಭಿವೃದ್ಧಿ, ಹುಸೇನ್‌ಪುರ ನಾಲೆ ಅಭಿವೃದ್ಧಿ, ನಾಗಾಪುರ ಏತನೀರಾವರಿ, ರಾಯನಹಳ್ಳಿ ಕೆರೆ ಫೀಡರ್ ನಾಲೆ ಅಭಿವೃದ್ಧಿ, ಚಿಲ್ಕುಂದ ಏತ ನೀರಾವರಿ ಯೋಜನೆ, ಮರದೂರು ಏತ ನೀರಾವರಿ ಯೋಜನೆ ಹಾಗೂ 15 ಮಂದಿಗೆ ಕೊಳವೆ ಬಾವಿ ಯೋಜನೆಗೆ ಅನುದಾನ ನೀಡಲಾಗಿದೆ ಎಂದರು.
ಉಳಿದಂತೆ ಅಲ್ಪಸಂಖ್ಯಾತರ ಕಾಲನಿಗಳಿಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 3 ಕೋಟಿ ರೂ., ಐಟಿಡಿಪಿ ಇಲಾಖೆಗೆ 4.80 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 23.20 ಕೋಟಿ ರೂ., ಗ್ರಾಮ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 10 ಕೋಟಿ ರೂ., ಸೆಸ್ಕ್‌ನ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ 57.32 ಕೋಟಿ ರೂ., ಹಿಂದುಳಿದ ವರ್ಗಗಳ ಇಲಾಖೆಯ ಅರಸು ಭವನ ನಿರ್ಮಾಣದ ಮುಂದುವರಿದ ಕಾಮಗಾರಿಗೆ 2 ಕೋಟಿ ರೂ., ಹುಣಸೂರು ಸಾರ್ವಜನಿಕರ ಆಸ್ಪತ್ರೆಗೆ ಮುಂದುವರಿದ ಕಾಮಗಾರಿಗೆ 9.50 ಕೋಟಿ ರೂ. ನೀಡಲಾಗಿದೆ. ಇದರ ಜತೆಗೆ ಬಸ್ ನಿಲ್ದಾಣಗಳು, ದೇವಾಲಯಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಸಮುದಾಯ ಭವನಗಳಿಗಾಗಿ 2 ಕೋಟಿ ರೂ.ವನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
38 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ:: ಈಗಾಗಲೇ ಬಿಡುಗಡೆಗೊಂಡಿರುವ ಅನುದಾನದ ಜತೆಗೆ ಮನುಗನಹಳ್ಳಿ ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ತುಂಬಿಸಲು 38 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಮಂಜೂರಾತಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಗೆ ಒಳಪಡುವ ಹಲವು ರಸ್ತೆಗಳ ಅಭಿವೃದ್ಧ್ದಿಗಾಗಿ 20 ಕೋಟಿ ರೂ. ನೀಡುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಎಂ.ಬಿ. ಸುರೇಂದ್ರ, ನಗರಸಭೆ ಅಧ್ಯಕ್ಷ ಶರವಣ, ಜೆಡಿಎಸ್ ಮುಖಂಡರಾದ ಹರವೆ ಶ್ರೀಧರ್, ಬಸವಲಿಂಗಯ್ಯ, ತಟ್ಟೆಕೆರೆ ಶ್ರೀನಿವಾಸ್ ಇದ್ದರು.