

ಥೀಮ್ ಪಾರ್ಕ್ ನಿರ್ಮಾಣಕ್ಕೆ 30 ಕೋಟಿ ರೂ. ಅನುಮೋದನೆ
ಚನ್ನಮ್ಮನ ಕಿತ್ತೂರು: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಕೋಟೆಯ ಮಧ್ಯಭಾಗದಲ್ಲಿರುವ 7 ಎಕರೆ ತೋಟದ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಗುರುವಾರ ಸಚಿವ ಸಂಪುಟದಲ್ಲಿ 30 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಕಿತ್ತೂರಿನ ರಾಜ್ಯ ವೈಭವ ಹಾಗೂ ಯುದ್ಧದ ಸನ್ನಿವೇಶಗಳು ನಿರ್ಮಾಣವಾಗಲಿದ್ದು, ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ಕ್ಕಿಂತ ವಿಭಿನ್ನವಾಗಿರಲಿದ್ದು, ಪ್ರವಾಸಿಗರನ್ನು ರಂಜಿಸಲಿದೆ.
ಶತಕಗಳಿಂದ ಅಭಿವೃದ್ಧಿ ವಂಚಿತ ಕಿತ್ತೂರು ಕೋಟೆಗೆ ಅಭಿವೃದ್ಧಿ ಭಾಗ್ಯ ಬಂದಿರುವುದು ನಾಡಿನ ಜನರಲ್ಲಿ ಸಂತಸ ತಂದಿದೆ. ಈಗಾಗಲೇ ಕೋಟೆಯ ಆವರಣ ಹಾಗೂ ಅರಮನೆಗೆ ತವೈಭವದ ಸುಂದರ ಸ್ಪರ್ಶ ನೀಡುತ್ತಿರುವ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಜತೆಗೆ ಥೀಮ್ ಪಾರ್ಕ್ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮ ಹಾಗೂ ವೀರರ ಪರಾಕ್ರಮದ ಇತಿಹಾಸ ಪ್ರವಾಸಿಗರಿಗೆ ಸಾರಿ ಹೇಳಲಿದೆ. ಒಟ್ಟಿನಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಲವು ಯೋಜನೆಗಳ ಮೂಲಕ ನಾಡಿನ ಅಭಿವದ್ಧಿಗೆ ಮುಂದಾಗಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಈಗಾಗಲೇ ರಾಣಿ ಚನ್ನಮ್ಮಳ ಕೋಟೆಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದರ ಜತೆಯಲ್ಲೇ ಥೀಮ್ ಪಾರ್ಕ್ ನಿರ್ಮಾಣ ಆಗುವುದರಿಂದ ಪ್ರವಾಸಿಗರನ್ನು ಸೆಳೆಯಲಿದೆ. > ಬಾಬಾಸಾಹೇಬ ಪಾಟೀಲ ಚನ್ನಮ್ಮನ ಕಿತ್ತೂರು ಶಾಸಕ