

ಪಿರಿಯಾಪಟ್ಟಣ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ 122 ರೈತರಿಗೆ 3 ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ ತಿಳಿಸಿದರು.
ಪಟ್ಟಣದ ಶ್ರೀ ಕನ್ನಂಬಾಡಿ ಅಮ್ಮನವರ ಸಮುದಾಯ ಭವನದಲ್ಲಿ ಭಾನುವಾರ ನಡೆದ 2024 - 25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ಯಾಂಕನ ಷೇರುದಾರ ಸದಸ್ಯರ ಕೃಷಿ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ದೀರ್ಘಾವಧಿ ಸಾಲ ಹಾಗೂ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದ್ದು, ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಶೇ.3 ಬಡ್ಡಿಯಂತೆ ಕಂತು ಮರುಪಾವತಿ ಮಾಡಿದರೆ ಬಡ್ಡಿ ಸಹಾಯಧನದ ಲಾಭ ಪಡೆದುಕೊಳ್ಳಬಹುದು, ಸುಸ್ತಿಯಾದಲ್ಲಿ ಯಾವ ಬಡ್ಡಿ ರಿಯಾಯಿತಿಯ ಸೌಲಭ್ಯವಿರುವುದಿಲ್ಲ ಎಂದು ತಿಳಿಸಿದರು.
ಬ್ಯಾಂಕ್‌ನಲ್ಲಿ ಛಾಪಾ ಕಾಗದ ಮಾರಾಟದ ವ್ಯವಸ್ಥೆ ಇದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಬ್ಯಾಂಕ್‌ನ ಉಳಿತಾಯ ಯೋಜನೆಯಡಿ ಪಿಗ್ಮಿ ಠೇವಣಿ ಮತ್ತು ನಿಶ್ಚಿತ ಠೇವಣಿ ಸೌಲಭ್ಯವಿದ್ದು, ಸದಸ್ಯರು ಇದರ ಉಪಯೋಗ ಪಡೆಯಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಒಟ್ಟಾರೆ 11 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, ಆಡಳಿತ ವೆಚ್ಚ ಮತ್ತು ಇತರೆ ವೆಚ್ಚಗಳನ್ನು ಕಳೆದು ಒಟ್ಟು 60 ಲಕ್ಷ ರೂ. ನಷ್ಟ ಅನುಭವಿಸಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ಇ.ಎಚ್.ವೆಂಕಟೇಶ್, ಉಪಾಧ್ಯಕ್ಷೆ ಮಮತಾ, ನಿರ್ದೇಶಕರಾದ ನೀಲಮ್ಮ, ಎಚ್.ಜಿ.ಪರಮೇಶ್, ಎನ್.ಎಸ್.ಪ್ರಮೀಳಾ, ಕೆ.ಪ್ರತೀಪ, ಕೆ.ಪಿ.ಮಂಜುನಾಥ್, ಬಿ.ರವಿ, ಎ.ರಾಜಣ್ಣ, ಪಿ.ಜಿ.ರೋಹಿಣಿ, ಶಿವಣ್ಣ, ಸುರೇಶ್, ಟಿ.ಡಿ.ನಾಗರಾಜ್, ಬ್ಯಾಂಕ್ ಸಿಬ್ಬಂದಿ ರಾಮಚಂದ್ರ ಮೂರ್ತಿ, ಆರ್.ಪಿ.ಪ್ರಣೀತಾ, ಬಿ.ಎಂ.ಗಗನ್, ಎಸ್.ಬಿ.ಸತೀಶ್ ಇತರರು ಇದ್ದರು.