

ಗುಳೇದಗುಡ್ಡ: ಪುರಸಭೆಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒಟ್ಟು 3.99 ಲಕ್ಷ ರೂ. ನಿರೀಕ್ಷಿತ ಉಳಿತಾಯದ ಗುರಿ ಹೊಂದಿದ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಮಂಡಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ಅಂದಾಜು ಕರಡು ಪ್ರತಿ ಮಂಡಿಸಿ ಮಾತನಾಡಿದ ಅವರು, ಈ ಮುಂಚೆ 2 ಸಲ ಪೂರ್ವಭಾವಿ ಸಭೆ ಆಯೋಜಿಸಿ ಸಾರ್ವಜನಿಕರಿಂದ ಸಲಹೆ ಪಡೆದು ಈ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ ಎಂದರು.
ಪ್ರಮುಖ ಆದಾಯ: ಕಟ್ಟಡ ಆಸ್ತಿ ತೆರಿಗೆಯ ಮೂಲಕ 1.40 ಕೋಟಿ ರೂ. ಮತ್ತು ಆಸ್ತಿ ತೆರಿಗೆಯ ದಂಡ ದಿಂದ 20 ಲಕ್ಷ ರೂ., ಉದ್ದಿಮೆ ಪರವಾನಿಗೆ ಶುಲ್ಕವಾಗಿ 5.75 ಲಕ್ಷ ರೂ., ಅಂಗಡಿ ಮಳಿಗೆಗಳ ಬಾಡಿಗೆಯಿಂದ 44 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕದಿಂದ 17 ಲಕ್ಷ ರೂ., ಅಭಿವೃದ್ಧಿ ಶುಲ್ಕಗಳಿಂದ 8 ಲಕ್ಷ ರೂ., ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ 20 ಲಕ್ಷ ರೂ., ನೀರಿನ ದರಗಳ ಆದಾಯ 58 ಲಕ್ಷ ರೂ., ನೀರಿನ ಸಂಪರ್ಕದಿಂದ 3.50 ಲಕ್ಷ ರೂ., ಸರ್ಕಾರದಿಂದ ಎಸ್‌ಎ್ಸಿ ವಿಶೇಷ ಅನುದಾನ 2.15 ಕೋಟಿ ರೂ., 4ನೇ ಹಣಕಾಸು ಯೋಜನೆಯಿಂದ 1.55 ಕೋಟಿ ರೂ., ಬರಪರಿಹಾರ ಅನುದಾನದಿಂದ 6 ಲಕ್ಷ ರೂ. ಸೇರಿದಂತೆ ಒಟ್ಟು 20.97 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಪ್ರಮುಖ ವೆಚ್ಚಗಳು: ಪಟ್ಟಣದ ರಸ್ತೆ ಮತ್ತು ಚರಂಡಿಗಳ ದುರಸ್ತಿಗಾಗಿ ಅಂದಾಜು 2 ಕೋಟಿ ರೂ., ಹೈಮಾಸ್ಕ ವಿದ್ಯುತ್ ದೀಪ, ಸೋಲಾರ ಮತ್ತು ಬೀದಿ ದೀಪಗಳ ಖರೀದಿಗಾಗಿ 24 ಲಕ್ಷ ರೂ., ಮಾರುಕಟ್ಟೆ ಹಾಗೂ ಇತರೆ ನಿರ್ಮಾಣಕ್ಕಾಗಿ 15 ಲಕ್ಷ ರೂ., ಸ್ವಚ್ಚ ಭಾರತ ಕಾರ್ಯಕ್ರಮ ಅನುಷ್ಠಾನಕ್ಕಾಗಿ 1.75 ಕೋಟಿ ರೂ., ಹೊರಗುತ್ತಿಗೆ ನೀರು ಸರಬರಾಜು ನಿರ್ವಹಣೆ ಮತ್ತು ಇತರೇ ದುರಸ್ತಿ ಕಾಮಗಾರಿಗಾಗಿ 1.10 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 20.93 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರಾದ ಸಂತೋಷ ನಾಯನೇಗಲಿ, ವಿಠ್ಠಲಸಾ ಕಾವಡೆ, ರಫೀಕ್ ಕಲ್ಬುರ್ಗಿ, ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ಶ್ಯಾಮಸುಂದರ ಮೇಡಿ, ಅಮರೇಶ ಕವಡಿಮಟ್ಟಿ, ಶಿಲ್ಪಾ ಹಳ್ಳಿ, ರಾಜವ್ವ ಹೆಬ್ಬಳ್ಳಿ, ಜ್ಯೋತಿ ಅಲೂರ, ವಿದ್ಯಾ ಮುರಗೋಡ, ರಾಜೇಶ್ವರಿ ಉಂಕಿ, ನಾಗರತ್ನಾ ಲಕ್ಕುಂಡಿ, ಸುಮಿತ್ರಾ ಕೋಡಬಳಿ, ಅಭಿಯಂತರ ಎಂ.ಜಿ. ಕಿತ್ತಲಿ, ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಲೆಕ್ಕಾಧಿಕಾರಿ ಕಟ್ಟಿಮನಿ, ಆರ್.ವಿ. ಚಂದರಗಿ ಮತ್ತಿತರರಿದ್ದರು.