ಕೇಂದ್ರದಿಂದ 21 ಲಕ್ಷ ರೂ. ಪರಿಹಾರ ಜಮಾ

rajendra Naik
Published on

ಅಂಕೋಲಾ: ಮಳೆಗಾಲದಲ್ಲಿ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನೊಂದವರ ಖಾತೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಒಟ್ಟೂ 21 ಲಕ್ಷ ರೂ. ಜಮಾ ಆಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ನಾಯ್ಕ ತಿಳಿಸಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಶಿರೂರು ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟ 7 ಜನರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡಿದ್ದ ಉಳವರೆಯ 14 ಜನರ ಬ್ಯಾಂಕ್ ಖಾತೆಗೆ ತಲಾ 50 ಸಾವಿರ ರೂ. ಜಮಾ ಆಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಮಾದ್ಯಮ ಸಹ ವಕ್ತಾರ ಜಗದೀಶ ನಾಯಕ ಮೊಗಟಾ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ಕೇಂದ್ರದಿಂದ ಪರಿಹಾರ ಒದಗಿಸುವದು ಅಷ್ಟು ಸುಲಭವಾದದ್ದಲ್ಲ. ಅದಕ್ಕೆ ತನ್ನದೇ ಆದ ಹಲವು ನಿಬಂಧನೆಗಳು ಮತ್ತು ಇತಿಮಿತಿಗಳಿರುತ್ತವೆ. ಆದರೆ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೆಚ್ಚಿನ ಮುತುವರ್ಜಿ ವಹಿಸಿ ಹಣ ಮಂಜೂರಾಗಲು ಶ್ರಮಿಸಿದ್ದಾಋಎ ಎಂದರು.

ರಾಜ್ಯ ಸರ್ಕಾರ ಮನೆ ಕಳೆದು ಕೊಂಡವರಿಗೆ ಆಶ್ರಯ ಮನೆ ಯೋಜನೆಯಂತೆ ಮನೆ ಮಂಜೂರಿಯ ಆಶ್ವಾಸನೆ ನೀಡಿತೇ ಹೊರತು ಅವರಿಗೆ ಇದುವರೆಗೆ ಮನೆ ಕಟ್ಟಿ ಕೊಡುವ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಶಾಸಕರು ಮೃತದೇಹ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಕಾಳಜಿವಹಿಸಿ, ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸುವ ಉತ್ತ ಮ ಕಾರ್ಯವನ್ನು ಮಾಡಿದ್ದಾರೆ. ಆದರೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ರಾಜ್ಯ ಸರ್ಕಾರ ಕೂಡಲೆ ಮುಂದಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇರಳದ ವಯನಾಡು ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ನೂರು ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ ಆದರೆ ನಮ್ಮದೇ ರಾಜ್ಯದ ಶಿರೂರು ದುರಂತದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ನಿಷ್ಕಾಳಜಿ ತೋರುತ್ತಿರುವದು ಸರಿಯಲ್ಲ ಎಂದರು.

ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಉಪಾಧ್ಯಕ್ಷ ಬಿಂದೇಶ ನಾಯಕ, ತಾಲೂಕು ಮಂಡಲದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ವಿಶೇಷ ಆಹ್ವಾನಿತ ಸಂಜಯ ನಾಯ್ಕ ಭಾವಿಕೇರಿ, ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ, ಗಣಪತಿ ನಾಯ್ಕ ಹನುಮಟ್ಟಾ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಾಮು ರಾಯ್ಕರ, ಉಪಾಧ್ಯಕ್ಷ ಕೃಷ್ಣಕುಮಾರ ಮಹಾಲೆ, ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ನಾಗೇಶ ಕಿಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net