

ಗೌರಿಬಿದನೂರು: ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರ ತವರೂರಿನಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನು 100 ಎಕರೆ ಪ್ರದೇಶದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ತಾಲೂಕಿನ ಹೊಸೂರಿನಲ್ಲಿನ ಎಚ್.ಎನ್.ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸೋಮವಾರ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಎಚ್.ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೂತನ ಸಭಾಂಗಣ, ಕಿರು ತಾರಾಲಯ ಮತ್ತು ವಿಜ್ಞಾನ ಗ್ಯಾಲರಿಗಳ ಲೋಕಾರ್ಪಣೆ ಮತ್ತು 200 ಕೋಟಿ ರೂ.ವೆಚ್ಚದ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ತಜ್ಞ ನರಸಿಂಹಯ್ಯ ಅವರ ತವರೂರು ವೈಜ್ಞಾನಿಕ ಕೆಲಸಗಳಿಂದ ಇಡೀ ಜಗತ್ತಿನ ಗಮನ ಸೆಳೆಯುವಂತಾಗಬೇಕು. ಸ್ಥಳೀಯವಾಗಿ ಸುಸ್ಥಿರ ಅಭಿವೃದ್ಧಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ 100 ಎಕರೆ ವಿಶಾಲ ಪ್ರದೇಶದಲ್ಲಿ ಆಧುನಿಕ ಕೇಂದ್ರ ನಿರ್ಮಿಸಲಾಗುವುದು ಎಂದರು.
ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಬಲೀಕರಣ ಇದ್ದಕ್ಕಿದ್ದಂತೆ ಕಾಣುವುದಿಲ್ಲ. ಇದಕ್ಕೆ ಗುಣಮಟ್ಟದ ಶಿಕ್ಷಣದ ಬುನಾದಿ ಹಾಕಬೇಕು. ಇದಕ್ಕೆ ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಅತ್ಯುತ್ತಮ ಭಾಷಿಕ ಕೌಶಲ ಮತ್ತು ಗಣಿತ ಪ್ರೇಮ ಬೆಳೆಸಲು ಒತ್ತು ಕೊಡಲಾಗಿದೆ. ಮಕ್ಕಳ ಮೂಲಕ ದೇಶದ ಉಜ್ವಲ ಭವಿಷ್ಯ ನಿರ್ಮಿಸುವ ಮುಖ್ಯ ಗುರಿ ಹೊಂದಿರುವ ಹೊಸ ನೀತಿಯ ಫಲವು ಹತ್ತು ವರ್ಷಗಳಲ್ಲಿ ಸಮಾಜಕ್ಕೆ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಎಚ್.ನರಸಿಂಹಯ್ಯ ಅವರು ಅಮೆರಿಕಕ್ಕೆ ಹೋಗಿ ಎರಡು ಪಿಎಚ್‌ಡಿಗಳನ್ನು ಮಾಡಿಕೊಂಡು ವಾಪಸ್ ತಾಯ್ನಡಿಗೆ ಬಂದು ಸೇವೆ ಸಲ್ಲಿಸಿದರು. ಹಾಗೆಯೇ ವಿದೇಶಗಳಲ್ಲಿ ಅಧ್ಯಯನ ಮುಗಿಸಿದರೂ ದೇಶದ ಅಭಿವೃದ್ಧಿ ಕೊಡುಗೆ ನೀಡಬೇಕು ಎಂದರು. ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ, ಮೊದಲ ಹಂತದಲ್ಲಿ 100 ಎಕರೆ ಪ್ರದೇಶದಲ್ಲಿ ವಿಜ್ಞಾನ ಕೇಂದ್ರವನ್ನು ಅಭಿವೃದ್ಧಿ, ಎರಡನೇ ಹಂತದದಲ್ಲಿ 130 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಎಚ್ಚೆನ್ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಕೆ.ಪಿ.ಜೆ.ರೆಡ್ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಜಿಲ್ಲಾಧಿಕಾರಿ ಆರ್.ಲತಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕ ಎ.ಬಿ.ಬಸವರಾಜು ಮತ್ತಿತರರು ಇದ್ದರು.
ವಿಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಬೆಳವಣಿಗೆ ಕಂಡು ಬರುತ್ತಿದೆ. ಇದೇ ವೇಳೆ ಸಿ.ವಿ.ರಾಮನ್ ಬಳಿಕ ಯಾರೂ ನೊಬೆಲ್ ಪ್ರಶಸ್ತಿ ಪಡೆಯಲಿಲ್ಲ ಎಂಬ ಕೊರಗು ಕಾಡುತ್ತಿದೆ. ಇದಕ್ಕೆ ಇಲ್ಲಿನ ವಿಜ್ಞಾನ ಕೇಂದ್ರದಿಂದ ಅತ್ಯುತ್ತಮ ಸಾಮರ್ಥ್ಯದ ವಿಜ್ಞಾನಿಗಳು ಹೊರಹೊಮ್ಮಬೇಕು. ಎಸ್.ಸೋಮನಾಥ್, ಇಸ್ರೋ ಅಧ್ಯಕ್ಷ