ತಿ.ನರಸೀಪುರದ ರೈತರಿಗೆ 20 ಕೋಟಿ ರೂ. ಕೃಷಿ ಸಾಲ

31 aug tnp 01
Published on

ತಿ.ನರಸೀಪುರ: ಮುಂದಿನ ಆರ್ಥಿಕ ಸಾಲಿನ ವರ್ಷದಲ್ಲಿ ತಾಲೂಕಿನ ರೈತರಿಗೆ 20 ಕೋಟಿ ರೂ.ಗಳ ಕೃಷಿ ಸಾಲ ನೀಡಲು ಯೋಜಿಸಲಾಗಿದೆ ಎಂದು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ(ಪಿಎಲ್‌ಡಿ) ಅಧ್ಯಕ್ಷ ಎಂ.ಮಹದೇವಣ್ಣ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕಿನ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

2022-23 ನೇ ಸಾಲಿನಲ್ಲಿ ಬ್ಯಾಂಕಿನಿಂದ ಸಾಲ ಪಡೆದ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡದೇ ಸುಸ್ತಿದಾರರಾದ ಹಿನ್ನೆಲೆಯಲ್ಲಿ ಬ್ಯಾಂಕ್ ನಷ್ಟ ಅನುಭವಿಸಿದೆ. ಈಗ ಸರ್ವ ಸದಸ್ಯರು ಹಾಗೂ ಬ್ಯಾಂಕಿನ ಅಧಿಕಾರಿಗಳ ಕ್ರಿಯಾಶೀಲ ಕಾರ್ಯಾಚರಣೆಯಿಂದ ಸಾಲ ವಸೂಲಾತಿ ಉತ್ತಮವಾಗಿ ನಡೆದಿದ್ದು, ಬ್ಯಾಂಕ್ ಲಾಭಾಂಶದೆಡೆಗೆ ದಾಪುಗಾಲು ಹಾಕುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದಲ್ಲಿ 20 ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಿದ್ದೇವೆ. ಬ್ಯಾಂಕಿನ ಷೇರುದಾರರು ಸರಿಯಾದ ದಾಖಲಾತಿಯೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಯಾವುದೇ ರೈತರಿಗೂ ಸಾಲ ನಿರಾಕರಣೆ ಮಾಡದೆ ಎಲ್ಲ ರೈತರಿಗೂ ಸಾಲ ವಿತರಣೆ ಮಾಡಲಾಗುತ್ತದೆ. ಆದರೆ ಸಾಲ ಪಡೆದ ರೈತರು ಸಕಾಲಕ್ಕೆ ಪಡೆದ ಸಾಲವನ್ನು ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ ಎಂದರು.

ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಎನ್.ಮಹೇಶ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸದಸ್ಯರ ಸಲಹೆ ಮೇರೆಗೆ ಮುಂದಿನ ವರ್ಷದಿಂದ ಸದಸ್ಯರೆಲ್ಲರಿಗೂ ವಾರ್ಷಿಕ ವರದಿಯ ಪ್ರತಿಯನ್ನು ನೀಡುವುದಾಗಿ ತಿಳಿಸಿದರು. ಬ್ಯಾಂಕಿನ ಸರ್ವ ಸದಸ್ಯರ ಸಹಕಾರದಿಂದ ಸಾಲ ವಸೂಲಾತಿಯಲ್ಲಿ ಮುನ್ನಡೆ ಸಾಧಿಸಿದೆ. ಸಹಕಾರಿ ಕಾಯ್ದೆ ಪ್ರಕಾರ 5 ವಾರ್ಷಿಕ ಮಹಾಸಭೆಯ ಪೈಕಿ 2 ವಾರ್ಷಿಕ ಮಹಾಸಭೆಗೆ ಹಾಜರಾಗಬೇಕು ಹಾಗೂ 2 ವರ್ಷ ಕನಿಷ್ಠ ವ್ಯವಹಾರ ನಿರ್ವಹಿಸಬೇಕು ಇಲ್ಲದಿದ್ದಲ್ಲಿ ಮತ ಚಲಾಯಿಸಲು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದರು.

ಕಾರ್ಯಕ್ರಮಕ್ಕೆ ಮೊದಲು ಸದರಿ ಸಾಲಿನಲ್ಲಿ ಮರಣ ಹೊಂದಿದ ಸಹಕಾರಿಗಳಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬ್ಯಾಂಕಿನಿಂದ ಸಾಲ ಪಡೆದು ಕ್ರಮವಾಗಿ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ 15 ರೈತರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಎನ್.ಎನ್.ಮಹದೇವಸ್ವಾಮಿ, ನಿರ್ದೇಶಕ ಕೆ.ವಜ್ರೇಗೌಡ, ಎಂ.ಎಸ್.ಶಿವಮೂರ್ತಿ, ಎನ್.ಲಿಂಗಪ್ಪಾಜಿ, ಎಂ.ನಾಗರತ್ನ, ರಾಜಮಣ್ಣಿ, ಎ.ಎಂ.ಮಹದೇವ(ಮಧು), ಎಸ್.ಮಹೇಶ್, ಟಿ.ಎಸ್.ಪ್ರಸನ್ನ, ಸಿ.ಸೋಮಣ್ಣ, ಆರ್.ಮಹೇಶ್, ಎನ್.ಅನಿಲ್ ಕುಮಾರ್, ಎಂ.ಕೆ.ಶಿವಕುಮಾರ್, ಮಾಜಿ ಉಪಾಧ್ಯಕ್ಷ ಬಿ.ಎಂ.ಲಿಂಗರಾಜು, ತಾ.ಪಂ ಮಾಜಿ ಉಪಾಧ್ಯಕ್ಷ ಕುಕ್ಕುರು ಪ್ರಸನ್ನ, ಬ್ಯಾಂಕಿನ ಪ್ರಭಾರ ಲೆಕ್ಕಿಗ ಪ್ರಭುಸ್ವಾಮಿ, ಟಿ.ಎಂ.ನಾಗರತ್ನಬಾಯಿ, ತನುಜಾ, ಬಿ.ಶಂಕರ ಸೇರಿದಂತೆ ಷೇರುದಾರ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net