

ಹೊಸಕೋಟೆ: ಮೃತ ಅರ್ಚಕರ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮೆ ಪರಿಹಾರ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದ ಖಾಸಗಿ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಹೊಸಕೋಟೆ ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
5 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಅರ್ಚಕರ ಮಕ್ಕಳಿಗೆ ಶಿಷ್ಯ ವೇತನ ಹಾಗೂ 35,000 ಅರ್ಚಕರಿಗೆ ವಿಮೆ ನೀಡಿ, ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ನಿರ್ಮಾಣ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕರ ತಸ್ತಿಕ್ ವಾರ್ಷಿಕ 60 ಸಾವಿರದಿಂದ 72 ಸಾವಿರಕ್ಕೆ ಏರಿಕೆ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದರು.
ರಾಜ್ಯದಲ್ಲಿ ಎ ದರ್ಜೆ ದೇವಾಲಯಗಳ ವರಮಾನದಲ್ಲಿ ಬಿ ಮತ್ತು ಸಿ ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಶೇ.10 ಅನುದಾನ ನೀಡುವ ವಿಧೇಯಕಕ್ಕೆ ರಾಜ್ಯಪಾಲರು ವರ್ಷದಿಂದ ತಡೆಹಿಡಿದಿದ್ದಾರೆ. ಇದಕ್ಕೆ ಬಿಜೆಪಿಯವರು ವಿನಾಕಾರಣ ವಿರೋಧ ಮಾಡುತ್ತಾರೆ. ಹೀಗಾಗಿ ಬಿಜೆಪಿಯವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ಅರ್ಚಕರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುವಾಗ ಕೇಳಿಕೊಳ್ಳಲಿ ಎಂದು ತಿವಿದರು. ಧಾರ್ಮಿಕ ದತ್ತಿ ತಹಸೀಲ್ದಾರ್ ಹೇಮಾವತಿ, ತಾಲೂಕು ಕಚೇರಿ ಗುಮಾಸ್ತೆ ಕುಮಾರಿ, ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟದ ಗೌರವಾಧ್ಯಕ್ಷ ಶ್ಯಾಮ್ಸುಂದರ್ ದೀತ್, ಅಧ್ಯಕ್ಷ ಅಶ್ವತ್ಥ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುಧೀಂದ್ರ ಶರ್ಮ, ಉಪಾಧ್ಯಕ್ಷ ರವಿಕುಮಾರ್, ಸಂಟನಾ ಕಾರ್ಯದರ್ಶಿ ಶಿವಕುಮಾರ್, ನಾಗೇಂದ್ರ ಪ್ರಸಾದ್, ಶೇಷಾದ್ರಿ, ಸಹ ಕಾರ್ಯದರ್ಶಿ ನಟರಾಜ್, ಕಾರ್ಯದರ್ಶಿ ರವಿಚಂದ್ರ, ಸಂಚಾಲಕ ಮಹೇಶ್ ಕುಮಾರ್, ರೇಣುಕಾ ಆರಾಧ್ಯ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಡಾ.ಎಚ್.ಎಂ ಸುಬ್ಬರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್ ಗೌಡ ಇದ್ದರು.
ಬೆನ್ನೆಲುಬಾಗಿ ನಾವಿದ್ದೇವೆ! :ಹೊಸಕೋಟೆಯಲ್ಲಿ 109ನೇ ಶಾಖೆ ಉದ್ಘಾಟನೆ ಮಾಡಲಾಗಿದೆ. ಅರ್ಚಕರ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಸಂಟನೆ ಮುಖ್ಯ. ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉತ್ತಮ ಸ್ಪಂದನೆ ನೀಡಿದ್ದಾರೆ. ಈ ಬಾರಿಯೂ ಅರ್ಚಕರನ್ನು ಕೈ ಬಿಡದೆ ಸ್ವಸ್ತಿಕ್ ಹೆಚ್ಚಳ ಮಾಡಿದ್ದಾರೆ. ಅರ್ಚಕರಿಗೆ ಬೆನ್ನೆಲುಬಾಗಿ ನಾವೆಲ್ಲ ಇದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಚಿವದ್ವಯರ ಮುಂದೆ ಬೇಡಿಕೆ ಇಟ್ಟ ಶಾಸಕ : ಹೊಸಕೋಟೆಯಲ್ಲಿ ಬಿಎಂಟಿಸಿ ಬಸ್ ಡಿಪೋ ಇದ್ದು, ಅಕ್ಕಪಕ್ಕದ ಜಿಲ್ಲೆಗೆ ತೆರಳಲು ನಗರಕ್ಕೆ ಕೆಎಸ್ಆರ್ಟಿಸಿ ಡಿಪೋ ಮಾಡಿಕೊಡಬೇಕು. ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವದ್ವಯರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅರ್ಚಕರ ಬೇಡಿಕೆಗಳ ಪರ ಧ್ವನಿ : ರಾಮಲಿಂಗಾರೆಡ್ಡಿ ಅವರು ಮುಜರಾಯಿ ಸಚಿವರಾದ ನಂತರ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಲಯಗಳ ಜಮೀನು 3500 ಎಕರೆಯಿಂದ 18000 ಎಕರೆಗೆ ಏರಿಕೆ ಮಾಡಿದ್ದಾರೆ. ಇದು ಅರ್ಚಕರ ಮೇಲಿರುವ ಕಾಳಜಿ ತೋರುತ್ತದೆ. ಅರ್ಚಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಸರ್ಕಾರದ ಮಟ್ಟದಲ್ಲಿ ಅರ್ಚಕರ ಬೇಡಿಕೆಗಳ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ರಾಜ್ಯದಲ್ಲಿ 38600 ಮುಜರಾಯಿ ದೇವಾಲಯಗಳಿದ್ದು, 37000 ಸಿ ಕೆಟಗರಿ ದೇವಾಲಯಲಿವೆ. 10 ಸಾವಿರ ದಲಿತ ಅರ್ಚಕರು ಸೇರಿ ಎಲ್ಲ ಜನಾಂದವರು ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇವಾಲಯಗಳನ್ನು ಖಾಸಗಿತನ ಮಾಡುವ ಹುನ್ನಾರವನ್ನು ಎಂದಿಗೂ ಯಾರು ಮಾಡಬಾರದು. | ಪೊ.ಡಾ. ರಾಧಾಕೃಷ್ಣ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ಅಧ್ಯಕ್ಷ