

ಹುಬ್ಬಳ್ಳಿ : ಇಡೀ ಭಾರತದಲ್ಲಿ ಅತ್ಯಂತ ಮಹತ್ವದ ಧಾರ್ವಿುಕ ಯಾತ್ರಾ ಸ್ಥಳವಾಗಿ ಪ್ರಸಿದ್ಧಿಗೊಂಡಿರುವ ವರೂರಿನ ನವಗ್ರಹ ತೀರ್ಥಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ 2 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರಕಟಿಸಿದರು.
ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನಿಮಾಣವಾಗಿರುವ ಸುಮೇರು ಪರ್ವತದ ಪಂಚಲೋಹ ಕಳಸಾರೋಹಣ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಕರ್ನಾಟಕದಲ್ಲಿ ನೂರಾರು ವರ್ಷಗಳ ಹಿಂದೆ ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ ಅರಸುಗಳ ಕಾಲದಲ್ಲಿ ನಿಮಾಣಗೊಂಡ ಸುಮಾರು 4 ಸಾವಿರ ಜೈನ ಬಸದಿ, ಮಂದಿರಗಳಿವೆ. ಹಲವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ನಮ್ಮ ವಿನಂತಿ ಮೇರೆಗೆ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಲಕ್ಕುಂಡಿಯ 8 ಜೈನ ಬಸದಿಗಳನ್ನು ಪುನರ್ ನಿಮಾಣ ಮಾಡಿದ್ದಾರೆ. ಇನ್ನೂ ಹಾಗೇ ಉಳಿದಿರುವ ಇತರ ಬಸದಿ, ವಿಹಾರಗಳನ್ನು ಪುನರ್ನಿಮಾಣ ಮಾಡಲು ಜೈನ ಆಚಾರ್ಯರು ಮತ್ತು ಜೈನ ಸಮಾಜದ ದಾನಿಗಳು ಮುಂದೆ ಬರಬೇಕು ಎಂದು ಸಚಿವರು ಮನವಿ ಮಾಡಿದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಸುರೇಂದ್ರ ಹೆಗ್ಗಡೆ, ರಾಜೇಂದ್ರ ಬೀಳಗಿ, ಸುಭಾಸಸಿಂಗ್ ಜಮಾದಾರ, ತೋಟಪ್ಪ ನಿಡಗುಂದಿ, ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷೆ ಶ್ರೀದೇವಿ ಚೌಗಲೆ, ಕಾರ್ಯದರ್ಶಿ ಅನಿಲಕುಮಾರ ಚೌಗಲೆ, ವಿದ್ಯಾಧರ ಪಾಟೀಲ, ಬ್ರಹ್ಮಕುಮಾರ ಬೀಳಗಿ, ಜಿ.ಜಿ. ಲೋಬೋಗೋಳ, ಅಶೋಕ ಬಾಗಮಾರ, ಮನೋಜ ಬಾಫಣಾ, ಉತ್ತಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಭಾರತ ಶಕ್ತಿಯುತವಾಗಬೇಕು: ಭಾರತವು ಶಕ್ತಿಯುತವಾಗಬೇಕು. ಆಗಲೇ ಜಗತ್ತು ಅದರ ಮಾತು ಕೇಳುವುದು. ದುರ್ಬಲ ರಾಷ್ಟ್ರಕ್ಕೆ ಪ್ರಪಂಚದಲ್ಲಿ ಬೆಲೆ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರ ಸಂಚಾಲಕ ಮಂಗೇಶಜಿ ಭೇಂಡೆ ಹೇಳಿದರು.
ಸುಮೇರು ಪರ್ವತ ಕಳಸಾರೋಹಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಭಾರತವು ಶಕ್ತಶಾಲಿಯಾಗಲು ನಾವು ಜಾತಿ, ಪಂಥ, ಭಾಷೆ, ಪ್ರಾಂತ್ಯ ಮೊದಲಾದ ತಾರತಮ್ಯಗಳನ್ನು ತೊಡೆದುಹಾಕಬೇಕು. ಮೊದಲು ಎಲ್ಲರೂ ಭಾರತೀಯರು ಎನಿಸಬೇಕು. ಒಂದೇ ಮನಸ್ಸಿನಿಂದ ಎಲ್ಲರೂ ಒಂದಾದಾಗಲೇ ಭಾರತವು ಶಕ್ತಿಯುತವಾಗುವುದು ಎಂದರು.
ಅದಕ್ಕಾಗಿ ಭಗವಾನ್ ಮಹಾವೀರರು ಬೋಧಿಸಿದ ಅಹಿಂಸೆ, ಪ್ರಕೃತಿ ಪ್ರೇಮ ಮತ್ತು ಸ್ವದೇಶಿ ಜೀವನ ಶೈಲಿಯನ್ನು ದೇಶವಾಸಿಗಳು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ ಭಾಗವತ ಅವರು ವಿಡಿಯೋ ಸಂದೇಶ ಕಳುಹಿಸಿ,ಪಂಚಕಲ್ಯಾಣಕ ಮಹೋತ್ಸವ ಹಾಗೂ ಭಗವಾನ್ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ದೇಶದ ಜನರಲ್ಲಿ ಆಧ್ಯಾತ್ಮ ಜೀವನಕ್ಕೆ ಪುನಶ್ಚೇತನ ನೀಡಿದೆ ಎಂದರು.
ಶಿಕ್ಷಣದ ಜೊತೆ ಸಂಸ್ಕಾರ : ದೇಶದಲ್ಲಿ ನಾವು ಮಕ್ಕಳಿಗೆ ಇದುವರೆಗೆ ಕೇವಲ ಶಿಕ್ಷಣವನ್ನಷ್ಟೇ ಕೊಟ್ಟಿದ್ದೇವೆ. ಆದರೆ ಉತ್ತಮ ಸಂಸ್ಕಾರ ಕೊಡುವುದನ್ನು ಮರೆತಿದ್ದೇವೆ. ಅದನ್ನು ವರೂರು ಕ್ಷೇತ್ರದಲ್ಲಿ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾಡುತ್ತಿದ್ದಾರೆ ಎಂದು ಪಂಜಾಬ ರಾಜ್ಯಪಾಲ ಗುಲಾಬಚಂದ ಕಟಾರಿಯಾ ಹೇಳಿದರು.
ವರೂರು ನವಗ್ರಹ ಕ್ಷೇತ್ರದಲ್ಲಿ ಮಧ್ಯಾಹ್ನ ಭಗವಾನ್ ಪಾರ್ಶ್ವಾಥರ ಪ್ರತಿಮೆಗೆ ಮಹಾಮಸ್ತಕಾಭಿಷೇಕ ಅಂಗವಾಗಿ ನಡೆದ ಪ್ರಥಮ ಕಲಶದ ಅಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಧಾರ್ವಿುಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕ್ರಾಂತಿ ಮಾಡಿದ್ದು, ಮುಂದಿನ ಪೀಳಿಗೆಗಳ ಉದ್ದಾರಕ್ಕೂ ಕಟಿಬದ್ಧರಾಗಿದ್ದಾರೆ. ಲೌಕಿಕ ಶಿಕ್ಷಣದ ಜತೆಗೆ ಧರ್ಮ ಮತ್ತು ಸಂಸ್ಕೃತಿಯ ಶಿಕ್ಷಣವನ್ನೂ ನೀಡುತ್ತ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. ದಾನಿಗಳಾದ ಮಹೇಂದ್ರ ಸಿಂಘಿ, ಅನಿಲಕುಮಾರ ಚೌಗಲೆ, ಕಿರಣ ಪಾಟೀಲ, ಸುಮೇರು ಪರ್ವತದ ಸೆಂಟ್ರಿಂಗ್ ಮಾಡಿದ ಪ್ರವೀಣ ಭಾಯಿ ಹಾಗೂ ಇತರರನ್ನು ರಾಜ್ಯಪಾಲರು ಸನ್ಮಾನಿಸಿದರು.
ಮಹಾಮಸ್ತಕಾಭಿಷೇಕ ಪ್ರಾರಂಭ : ನವಗ್ರಹ ತೀರ್ಥಕ್ಷೇತ್ರದಲ್ಲಿ ಬುಧವಾರ ಸಂಜೆ 9 ತೀರ್ಥಂಕರರಿಗೆ ಏಕಕಾಲಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು. ಇಂದ್ರ, ಇಂದ್ರಾಣಿಯರು ಮೊದಲು ಭಗವಾನ್ ಶ್ರೀ ಪಾರ್ಶ್ವನಾಥರು ಹಾಗೂ ಅದೇ ಕಾಲಕ್ಕೆ ಇತರ ತೀರ್ಥಂಕರರ ಮಸ್ತಕದ ಮೇಲೆ ಎಳೆನೀರು ಅಭಿಷೇಕ ಮಾಡಿದರು. ಹಳದಿ, ಕುಂಕುಮ, ಚಂದನ, ಕರ್ಪರ, ಗಿಡಮೂಲಿಕೆಗಳ ಮಿಶ್ರಿತ ಜಲಗಳಿಂದ ಮಸ್ತಕಾಭಿಷೇಕವು ನೆರವೇರಿತು.
ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಗುರುದೇವ ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ಹಾಗೂ ಇತರ ಆಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.