ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ೨.೪೬ ಕೋಟಿ ರೂ. ನೀಡಿದ ಡಾ.ಸುಬ್ರಮಣಿಯನ್ ಸ್ವಾಮಿ

N.U.NACHAPPA
Published on


ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಕೊಡವರ ಮೇಲೆ ಅಪಾರ ಅಭಿಮಾನ ತೋರಿರುವ ಹಿರಿಯ ರಾಜಕಾರಣಿ, ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ತಮ್ಮ ರಾಜ್ಯಸಭಾ ನಿಧಿಯಿಂದ ಕುಗ್ರಾಮಗಳ ಬಲ್ಯಮನೆ ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ ೨.೪೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಸಿಎನ್‌ಸಿ ಸಂಘಟನೆಯ ಮನವಿಗೆ ಸ್ಪಂದಿಸಿ ರಾಜ್ಯಸಭಾ ನಿಧಿಯಿಂದ ಇಷ್ಟು ದೊಡ್ಡ ಮೊತ್ತದ ಕೊಡುಗೆ ನೀಡಿರುವುದು ಶ್ಲಾಘನೀಯ ಮತ್ತು ಸಂಘಟನೆಯೊಂದರ ಕೋರಿಕೆಗೆ ಈ ರೀತಿಯಲ್ಲಿ ಸ್ಪಂದಿಸಿರುವುದು ವಿಶೇಷ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


ಆರ್ಥಿಕ ಸಹಾಯವನ್ನು ನೀಡಿದ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಈ ಕುರಿತು ಮುತುವರ್ಜಿ ವಹಿಸಿದ ವಿರಾಟ್ ಹಿಂದೂಸ್ಥಾನ್ ಸಂಗಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಡಾ.ಸ್ವಾಮಿಯವರ ಆಪ್ತ ಮುಂಬಯಿಯ ಜಗದೀಶ್ ಶೆಟ್ಟಿಯ ಅವರುಗಳಿಗೆ ಕೊಡವರ ಪರವಾಗಿ ಸಿ.ಎನ್.ಸಿ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ನಾಚಪ್ಪ ಹೇಳಿದ್ದಾರೆ. ರೂ.೨.೪೬ ಕೋಟಿಯನ್ನು ಮೂರು ವಿಭಾಗಗಳನ್ನಾಗಿ ಮಾಡಿದ್ದು, ೧ನೇ ವಿಭಾಗಕ್ಕೆ ರೂ. ೧.೫೦ ಕೋಟಿ, ೨ನೇ ವಿಭಾಗಕ್ಕೆ ರೂ.೨೧.೧೪ ಲಕ್ಷ ಮತ್ತು ೩ನೇ ವಿಭಾಗಕ್ಕೆ ರೂ.೭೫ ಲಕ್ಷ ಎಂದು ಬಿಡುಗಡೆಗೊಳಿಸಲಾಗಿದೆ. ಮುಂಬಯಿನ ಸಬ್ ಅರ್ಬನ್ ಡಿಸ್ಟ್ರಿಕ್ಟ್ ಕಲೆಕ್ಟೊರೇಟ್‌ಗೆ ಹಣ ಜಮಾವಣೆಗೊಂಡಿದ್ದು, ಅಲ್ಲಿಂದ ನೇರವಾಗಿ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಗೊಂಡಿದೆ ಎಂದು ನಾಚಪ್ಪ ತಿಳಿಸಿದ್ದಾರೆ.


ನ.೨೬ರಂದು ಮಡಿಕೇರಿಯಲ್ಲಿ ನಡೆಯುವ ೩೨ನೇ ಕೊಡವ ನ್ಯಾಷನಲ್ ಡೇಗೆ ಆಗಮಿಸುವ ಡಾ.ಸ್ವಾಮಿರವರು ಪೂರ್ಣಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ. ಅನುದಾನದ ಸಂಬಂಧದ ಪತ್ರವ್ಯವಹಾರಗಳಿಗೆ ಸ್ಪಂದಿಸಿ, ತುರ್ತು ಕ್ರಮ ಕೈಗೊಂಡು ಸಹಕರಿಸಿದ ಡಾ.ಸುಬ್ರಮಣಿಯನ್ ಸ್ವಾಮಿ, ಕೊಡಗು ಜಿಲ್ಲಾಧಿಕಾರಿಗಳು, ಸಿಬ್ಬಂದಿ ವರ್ಗ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮತ್ತವರ ಸಹಪಾಠಿ ಸಹದ್ಯೋಗಿಗಳ ಕಾಳಜಿಗೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net