

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 2.27 ಕೋಟಿ ರೂ. ಸಂಗ್ರಹವಾಗಿದೆ.
ಬೆಳಗ್ಗೆ 7 ಗಂಟೆಗೆ ಸಾಲೂರು ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಎಣಿಕೆ ಕಾರ್ಯ ಸಂಜೆ 5.45 ರವರೆಗೂ ನಡೆಯಿತು.
ಈ ಬಾರಿ ಮಹಾಲಯ ಅಮಾವಾಸ್ಯೆ ಹಾಗೂ ವಿಜಯ ದಶಮಿಯ ದಸರಾ ಜಾತ್ರೆಯಲ್ಲಿ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಜತೆಗೆ ವಾರ‌್ಯಾಂತ ರಜೆ ಹಾಗೂ ಇತರ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇ ಹುಂಡಿ ಹಣ 4,81,254 ರೂ. ಸೇರಿದಂತೆ 2,27,24,757 ರೂ. ನಗದು, 46 ಗ್ರಾಂ ಚಿನ್ನ ಹಾಗೂ 1 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಚಲಾವಣೆಯಲ್ಲಿ ಇಲ್ಲದ 2 ಸಾವಿರ ಮುಖಬೆಲೆಯ 9 ನೋಟು ಹಾಗೂ 9 ವಿದೇಶಿ ನೋಟುಗಳು ದೊರೆತಿದೆ. ಕಳೆದ ಬಾರಿ ಸೆ.18 ರಂದು ನಡೆದ ಹುಂಡಿ ಎಣಿಕೆಯಲ್ಲಿ 29 ದಿನದ ಅವಧಿಗೆ 1,70,16,820 ರೂ. ನಗದು, 30 ಗ್ರಾಂ ಚಿನ್ನ ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ನಾಮನಿರ್ದೇಶನ ಸದಸ್ಯರಾದ ಕಾಗಲವಾಡಿಯ ಮರಿಸ್ವಾಮಿ, ಕುಪ್ಯಾದ ಭಾಗ್ಯಮ್ಮ, ಕೀಳನಪುರದ ಮಹದೇವಪ್ಪ, ಹಾರೋಹಳ್ಳಿಯ ಗಂಗನ ತಿಮ್ಮಯ್ಯ, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಕಲ್ಯಾಣಮ್ಮ, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.