ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷ: ತನಿಖೆಗೆ ಈಶ್ವರಪ್ಪ ಆಗ್ರಹ

k s eeshwarappa
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.
Published on

ಶಿವಮೊಗ್ಗ: ವಕ್ಫ್ ಆಸ್ತಿ ಅತಿಕ್ರಮಣ ಕುರಿತು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅದೇ ರೀತಿ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೆಂದ್ರ ಈ ಹಿಂದೆ 150 ಕೋಟಿ ರೂ. ಆಮಿಷ ನೀಡಿದ್ದರು ಎಂಬ ಆರೋಪದ ಬಗ್ಗೆಯೂ ಸಿಬಿಐನಿಂದ ಗಂಭೀರ ತನಿಖೆಯಾಗಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ವಿಜಯೇಂದ್ರ ಆಮಿಷವೊಡ್ಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪದ ಬಗ್ಗೆ ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು. ಈ ನಡುವೆ ಮಾಣಿಪ್ಪಾಡಿ ಕೂಡ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಸಮಗ್ರ ತನಿಖೆ ಅವಶ್ಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಅಭಿಪ್ರಾಯಪಟ್ಟರು.

10 ವರ್ಷಗಳಿಗೂ ಮುನ್ನ ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯಲ್ಲಿ ಕಾಂಗ್ರೆಸ್‌ನ ಅನೇಕ ನಾಯಕರು ವಕ್ಫ್ ಆಸ್ತಿ ಕಬಳಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆಂಬ ಮಾಹಿತಿಯಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ನಾಯಕರು ಇಂತಹ ಕೆಲಸ ಮಾಡಿದ್ದರೆ ಅವರ ವಿರುದ್ಧ ಕ್ರಮವಾಗಬೇಕು. ಹೀಗಾಗಿ ಎಲ್ಲ ಆಯಾಮಗಳ ಬಗ್ಗೆ ತನಿಖೆ ಅವಶ್ಯ ಎಂದರು.

ಅನ್ವರ್ ಮಾಣಿಪ್ಪಾಡಿ ವರದಿ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಿಲ್ಲ. ಸರ್ಕಾರ ಏಕೆ ವರದಿ ಬಹಿರಂಗಕ್ಕೆ ಆಸಕ್ತಿ ತೋರುತ್ತಿಲ್ಲ? ಎಂದು ಈಶ್ವರಪ್ಪ ಪ್ರಶ್ನಿಸಿದರು. ವಕ್ಪ್ ಆಸ್ತಿಯನ್ನು ರಾಜಕಾರಣಿಗಳು ಮತ್ತು ಪ್ರಮುಖರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದರಲ್ಲಿ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಅನೇಕ ಗಣ್ಯರಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯನ್ನು ನುಂಗಿ ನೀರು ಕುಡಿದಿದ್ದಾರೆ. ನಾನು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಪ್ರಮುಖರಾದ ಗಣೇಶ್, ಸಂತೋಷ್, ಶ್ರೀಕಾಂತ್, ಪ್ರದೀಪ್, ಕುಬೇರಪ್ಪ, ಪ್ರಕಾಶ್, ಶಿವಕುಮಾರ್, ಜಾಧವ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net