

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ 150 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಆ ಮೂಲಕ ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1ಕೋಟಿ ರೂ. ಅನುದಾನದಲ್ಲಿ ಹಳೇ ಹುಬ್ಬಳ್ಳಿಯ ಎನ್.ಎ.ನಗರದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಒಳಚರಂಡಿ ಕಾಮಗಾರಿಗೆ 40 ಕೋಟಿ ರೂ., ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ., ಇತರ ಕಾಮಗಾರಿಗೆ 10 ಕೋಟಿ ರೂ. ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಳೆದ 11ವರ್ಷಗಳಿಂದ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಲೇ ಇವೆ. ಈಗಾಗಲೇ 1500 ಕೋಟಿ ರೂ.ಗು ಅಧಿಕ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೂ ಇನ್ನು ಅನೇಕ ಮಹತ್ವ ಯೋಜನೆಗಳು ಬಾಕಿ ಇದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಮುತವಲ್ಲಿ ಮಕ್ಬುಲ್ಅಹ್ಮದ್ ಕಳಸ, ರಫೀಕ್ ಸಂದಲವಾಲೆ, ಸದ್ದಾಮ ಬೆಂಗಳೂರ, ಅಶ್ಪಾರ್ ಲಕ್ಕುಂಡಿ, ನಾಸಿರ್ ಅಸುಂಡಿ, ಸೈಯದ್ ಸಲೀಂ ಮುಲ್ಲಾ, ಮುಸ್ತಾಕ್ ಮುದಗಲ್, ತೌಫಿಕ್ ಕಾರಡಗಿ, ಅಲ್ತಾಫ್ ಮುಲ್ಲಾ ಅಬ್ದುಲ್ ಕೋಳೂರ, ಮುಸ್ತಾಕ್ ಮುಳಗುಂದ, ಅನೇಕರಿದ್ದರು.